ಜಿಲ್ಲೆ

ಆಂಜನೇಯ, ಬಸವರಾಜ್‌ಗೆ ಹಾವೇರಿ ಉಸ್ತುವಾರಿ

ರಮೇಶ ಜಹಗೀರದಾರ್

ದಾವಣಗೆರೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪದಾಧಿಕಾರಿಗಳಿಗೆ ಜಿಲ್ಲೆ ಹಾಗೂ ವಿಧಾನಸಭೆ ಕ್ಷೇತ್ರಗಳ ಉಸ್ತುವಾರಿ ಜವಾಬ್ದಾರಿಯನ್ನು ನೀಡಿದ್ದು, ಮಾಜಿ ಸಚಿವ ಎಚ್. ಆಂಜನೇಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಅವರನ್ನು ಹಾವೇರಿ ಜಿಲ್ಲೆಯ ಉಸ್ತುವಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.  ಆಂಜನೇಯ ಅವರಿಗೆ ಹಾವೇರಿ ಜಿಲ್ಲಾ ಉಸ್ತುವಾರಿ, ಡಿ. ಬಸವರಾಜ್ ಅವರಿಗೆ ಹಾವೇರಿ ಜಿಲ್ಲೆಯ ಶಿಗ್ಗಾಂವ್, ಹಾವೇರಿ ಮತ್ತು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಲಾಗಿದೆ.  ಕೆಪಿಸಿಸಿ ಪದಾಧಿಕಾರಿಗಳ ಹುದ್ದೆಯು ಪಕ್ಷದ ಸಂಘಟನೆಯಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ ಹಾಗೂ ಪಕ್ಷದ ಮೇಲೆ ಹೆಚ್ಚಿನ ಮಟ್ಟದ ನಿರೀಕ್ಷೆಯನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಉಪಾಧ್ಯಕ್ಷರಿಗೆ ಜಿಲ್ಲಾ ಉಸ್ತುವಾರಿ ನಿರ್ವಹಣೆ ಜವಾಬ್ದಾರಿ ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ವಿಧಾನಸಭೆ ಕ್ಷೇತ್ರಗಳ ಉಸ್ತುವಾರಿ ನಿರ್ವಹಣೆಯ ಜವಾಬ್ದಾರಿಯನ್ನು ಆದೇಶದಲ್ಲಿ ನೀಡಲಾಗಿದೆ.  ತಮಗೆ ವಹಿಸಲಾದ ಜಿಲ್ಲೆ ಅಥವಾ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳು, ಅವಧಿ ಪೂರೈಸಿದ ಡಿಸಿಸಿ, ಬಿಸಿಸಿ ಅಧ್ಯಕ್ಷರ ಬದಲಾವಣೆ ಅವಶ್ಯವಿದ್ದಲ್ಲಿ ಅವುಗಳ ಪ್ರಸ್ತಾವನೆ, ಡಿಸಿಸಿ, ಬಿಸಿಸಿ, ವಾರ್ಡ್, ಪಂಚಾಯಿತಿ, ಬೂತ್ ಸಮಿತಿಗಳ ರಚನೆ ಹಾಗೂ ನಿರ್ವಹಣೆ, ಸದಸ್ಯತ್ವ ನೋಂದಣಿ, ಪಕ್ಷದ ಕಚೇರಿಗಳ ಅಸ್ತಿತ್ವ, ಡಿಸಿಸಿ /ಬಿಸಿಸಿಗಳು ಹೊಂದಿರುವ ನಿವೇಶನ, ಕಟ್ಟಡ ಕಚೇರಿ ಇವುಗಳ ಬಗ್ಗೆ ಮಾಹಿತಿ ಸಂಗ್ರಹಣೆ ಇತ್ಯಾದಿ ಪಕ್ಷ ಬಲವರ್ಧನೆಗೆ ಸಹಕಾರಿಯಾಗುವ ಕೆಳಹಂತದ ಎಲ್ಲ ಕಾರ್ಯ ಚಟುವಟಿಕೆಗಳನ್ನು ಸ್ಥಳೀಯ ಮುಖಂಡರ ಸಹಕಾರದೊಂದಿಗೆ ನಿರ್ವಹಿಸಲು ಸೂಚಿಸಲಾಗಿದೆ.