ದಾವಣಗೆರೆ : ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ ಮಾಡಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಅವರಿಗೆ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿದ ಕೆಲವೇ ಗಂಟೆಗಳಲ್ಲಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಿದ್ದ ಸ್ಪೀಕರ್, ಈಗ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಅಷ್ಟೇ ಆತುರವಾಗಿ ಸ್ಪೀಕರ್ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಿದ ಸುಪ್ರೀಂ ಕೋರ್ಟ್, ಒಬ್ಬ ಸಂಸದ ಅನರ್ಹಗೊಂಡರೆ ಅದು ಕೇವಲ ವ್ಯಕ್ತಿಯ ನಷ್ಟವಲ್ಲ, ಆತನನ್ನು ಆಯ್ಕೆ ಮಾಡಿದ ಇಡೀ ಕ್ಷೇತ್ರದ ಜನತೆಗೇ ಆಗುವ ನಷ್ಟವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಾಗಾಗಿ ಜನರ ಆಯ್ಕೆಯ ಹಕ್ಕಿನ ರಕ್ಷಣೆ ಆಗಬೇಕೆಂದು ಅಭಿಪ್ರಾಯಪಟ್ಟಿದೆ. ಸುಳ್ಳು ಸೋತಿದೆ, ಸತ್ಯ ಗೆದ್ದಿದೆ. ದ್ವೇಷ ಸೋತಿದೆ, ಪ್ರೀತಿ ಗೆದ್ದಿದೆ ಎಂದು ಡಿ. ಬಸವರಾಜ ತಿಳಿಸಿದ್ದಾರೆ.