ಜಿಲ್ಲೆ

ವಿಧಾನಸಭಾ ಚುನಾವಣೆಗೆ ಪಕ್ಷೇತರ ಸ್ಪರ್ಧೆ

ರಮೇಶ ಜಹಗೀರದಾರ್

ದಾವಣಗೆರೆ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಇನ್ಸೈಟ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ಹೇಳಿದರು.  ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ, ಬಿಜೆಪಿಯಲ್ಲಿ ಅಭಿವೃದ್ಧಿ ವಿಮುಖ ರಾಜಕಾರಣವಿದ್ದರೆ, ಜೆಡಿಎಸ್‌ನಲ್ಲಿ ಮತ್ತೊಂದು ರೀತಿಯಿದೆ. ಯಾವುದೇ ಪಕ್ಷದಲ್ಲಿರಲು ತಮಗೆ ಇಷ್ಟವಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧೆ ನಡೆಸಲು ಹೆಚ್ಚು ಒಲವಿದೆ. ಏಕೆಂದರೆ ನನ್ನ ಊರು ಕಕ್ಕರಗೊಳ್ಳ ಸಹ ಉತ್ತರ ಕ್ಷೇತ್ರಕ್ಕೆ ಬರಲಿದೆ. ಆದರೆ ಯಾವ ಕ್ಷೇತ್ರವಾದರೂ ಸರಿ ಶಾಸಕನಾಗಬೇಕು ಎಂಬುದು ನನ್ನ ಅಪೇಕ್ಷೆ ಎಂದರು.  ಯಾವುದೇ ಕೆಲಸ ಮಾಡಬೇಕೆಂದರೆ ಪ್ರಮುಖವಾಗಿ ರಾಜಕೀಯ ಅಧಿಕಾರ ಬೇಕು ಎಂಬುದು ಅಂಬೇಡ್ಕರ್ ಅವರ ನಿಲುವಾಗಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷ ಟಿಕೆಟ್ ನೀಡುತ್ತೇವೆಂದರೆ ಸಕಾರಾತ್ಮಕ ಯೋಚನೆ ಮಾಡಬಹುದು ಎಂದು ಹೇಳಿದರು.  ಕಾಂಗ್ರೆಸ್ ಪಕ್ಷದಲ್ಲಿ ಸದಸ್ಯತ್ವವಿದೆ. ರಾಜೀನಾಮೆ ನೀಡಲು ಹೋಗುವುದಿಲ್ಲ. ಬೇಕಾದರೆ ಪಕ್ಷದಿಂದ ನನ್ನನ್ನು ಉಚ್ಚಾಟನೆ ಮಾಡಲಿ. ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ ಎಂದರೆ ಕಾಂಗ್ರೆಸ್‌ನಿಂದ ಹೊರಬಂದಿದ್ದೇನೆ ಎಂದು ಅರ್ಥ ಎಂದು ತಿಳಿಸಿದರು.  ನಾನು ಅಹಿಂದ ವರ್ಗಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹಾಗೂ ಸಿದ್ದರಾಮಯ್ಯ ಪದಚ್ಯುತಿಗೆ ನಡೆಸುತ್ತಿರುವ ಕುತಂತ್ರಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಇದು ಮಹಾಪರಾಧವೆಂಬಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿದ್ದಾರೆ. ಏಕೆಂದರೆ ಅವರೊಂದು ಕುಟುಂಬದ ಪರವಾಗಿದ್ದಾರೆ ಎಂದು ಟೀಕಿಸಿದರು.  ಕಾಂಗ್ರೆಸ್ ಸರ್ಕಾರ ಬಂದು ಒಂದೂವರೆ ವರ್ಷಗಳಾದರೂ ಎಷ್ಟು ಜನ ಅಹಿಂದ ವರ್ಗದವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲಾಗಿದೆ? ಶೇ.80 ರಷ್ಟಿರುವ ಅಹಿಂದ ವರ್ಗಗಳ ಮತ ಪಡೆಯುವವರು ದೂಡಾ ಅಧ್ಯಕ್ಷರನ್ನಾಗಿ ಮಾಡಿದ್ದಾರಾ? ಕೇವಲ ನಾಮಕಾವಸ್ತೆ ನಾಮನಿರ್ದೇಶಕರನ್ನಾಗಿಸಿದ್ದಾರೆ ಎಂದರು.  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶೇ.80ರಷ್ಟು ಇರುವ ಅಹಿಂದ ವರ್ಗದವರು ಹೆಚ್ಚು ಶಾಸಕರಾಗಿ ಆಯ್ಕೆಯಾಗಲು ರಾಜ್ಯಾದ್ಯಂತ ಅಹಿಂದ ವರ್ಗಗಳ ಜಾಗೃತಿ ಮತ್ತು ಸಂಘಟನೆ ಮಾಡಲಾಗುವುದು ಎಂದು ತಿಳಿಸಿದರು.  ಮಹಮ್ಮದ್ ಅಲ್ತಾಫ್, ಪ್ರಸನ್ನಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.