ಜಿಲ್ಲೆ

ಚುನಾವಣೆ ಗೆಲುವು, ಕಾಂಗ್ರೆಸ್ ವಿಜಯೋತ್ಸವ

ರಮೇಶ ಜಹಗೀರದಾರ್

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಡಾ. ಪ್ರಭಾ ಮಲ್ಲಿಕಾರ್ಜುನ್, ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಡಿ.ಟಿ. ಶ್ರೀನಿವಾಸ್ ಆಯ್ಕೆಯಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ನಗರದಲ್ಲಿ ಶುಕ್ರವಾರ ವಿಜಯೋತ್ಸವ ಆಚರಿಸಿದರು.
 ಮಹಾನಗರ ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಎರಡೂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು.
 ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಮಾತನಾಡಿ, ಜಿಲ್ಲೆಯಲ್ಲಿ ನಮ್ಮವರೇ ಶಾಸಕರಿದ್ದಾರೆ, ಎಸ್.ಎಸ್. ಮಲ್ಲಿಕಾರ್ಜುನ್ ಸಚಿವರಾಗಿದ್ದಾರೆ. ಡಾ. ಪ್ರಭಾ ಮಲ್ಲಿಕಾರ್ಜುನ್ ಸಂಸದರಾಗುವ ಮೂಲಕ ದಾವಣಗೆರೆ ಶಕ್ತಿ ಕೇಂದ್ರವಾಗಿದೆ, ತ್ರಿಬಲ್ ಇಂಜಿನ್ ಆಡಳಿತ ಬಂದಿದೆ ಎಂದು ಹೇಳಿದರು.
 ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸುಶಿಕ್ಷಿತ, ಕೆಲಸ ಮಾಡುವ ಹಂಬಲವಿರುವ ಸಂಸದೆ ಆಯ್ಕೆಯಾಗಿದ್ದಾರೆ. ಅವರು ಜನರ ನಡುವೆ ಇರುವವರು ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿಯತ್ತ ಸಾಗಲಿದೆ ಎಂದು ತಿಳಿಸಿದರು.
 ದೊಡ್ಡ ನಗರಗಳಿಗೆ ಸೀಮಿತವಾಗಿರುವ ಐಟಿ, ಬಿಟಿ ಉದ್ಯಮಗಳನ್ನು ಮುಂಬರುವ ದಿನಗಳಲ್ಲಿ ದಾವಣಗೆರೆಗೆ ತಂದು, ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸಲಿದ್ದಾರೆ. ಮೆಕ್ಕೆಜೋಳ ಸಂಸ್ಕರಣಾ ಘಟಕ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವಂತೆ ವಿವಿಧ ಕೈಗಾರಿಕೆಗಳನ್ನು ತರಲು ಪ್ರಯತ್ನಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿಯ ಬೇರುಗಳು ಸಡಿಲವಾಗಿವೆ ಎಂದು ಹೇಳಿದರು.
 ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಕಿಚಡಿ ಸರ್ಕಾರ ರಚನೆಯಾಗುತ್ತಿದೆ. ಸ್ಥಿರತೆ ಇಲ್ಲದ, ದುರ್ಬಲ ಸರ್ಕಾರ ಇದಾಗಲಿದೆ. ಎನ್‌ಡಿಎ ಮಿತ್ರ ಪಕ್ಷಗಳ ನಾಯಕರಾದ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರನ್ನು ಒಟ್ಟಿಗೇ ತೆಗೆದುಕೊಂಡು ಹೋಗುವ ಸವಾಲು ಅವರ ಮುಂದಿದೆ. ಈ ಸರ್ಕಾರಕ್ಕೆ ಭವಿಷ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
 ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯ ಭದ್ರ ಕೋಟೆ ಛಿದ್ರವಾಗಿದೆ. 25 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿರಲಿಲ್ಲ. ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದರು.
 ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕಾರ್ಯಕರ್ತರು, ಮುಖಂಡರು ಒಮ್ಮತದಿಂದ ಕೆಲಸ ಮಾಡಿದ್ದೇವೆ, ಜನರೂ ಕೈ ಹಿಡಿದಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಶಿಕ್ಷಕರು ಕಾಂಗ್ರೆಸ್‌ನ ಡಿ.ಟಿ. ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
 ಪಾಲಿಕೆಯ ಹಿರಿಯ ಸದಸ್ಯ ಕೆ. ಚಮನ್ ಸಾಬ್ ಮಾತನಾಡಿ, ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿದ್ದರು, ದಾವಣಗೆರೆ ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡಿದ್ದೇವೆ ಎಂದು ತಿಳಿಸಿದರು.
 ಪಾಲಿಕೆ ಸದಸ್ಯರಾದ ವಿನಾಯಕ ಪೈಲ್ವಾನ್, ಗಡಿಗುಡಾಳು ಮಂಜುನಾಥ್, ಸವಿತಾ, ಮೀನಾಕ್ಷಿ, ಆಶಾ, ಸೌಮ್ಯಾ, ಜಾಕೀರ್ ಇದ್ದರು.

 (ಫೋಟೋ ಬರಲಿದೆ)