ದಾವಣಗೆರೆ : ಮಣಿಪುರದಲ್ಲಿ ನಡೆದ ಜನಾಂಗೀಯ ಗಲಭೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತ ಸೇರಿದ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸುರಿವ ಮಳೆಯಲ್ಲೇ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಮಣಿಪುರದಲ್ಲಿ 80 ದಿನಗಳಿಂದ ನಿರಂತರ ಜನಾಂಗೀಯ ಗಲಭೆ, ಮಹಿಳೆಯರ ಮೇಲೆ ದೌರ್ಜನ್ಯ, ಬೆತ್ತಲೆ ಮೆರವಣಿಗೆ ಮೊದಲಾದ ಘೋರ ಕೃತ್ಯಗಳು ನಡೆದಿವೆ. ಇಂದಿಗೂ ಹಿಂಸಾಚಾರ ನಡೆಯುತ್ತಿವೆ. ಕೇಂದ್ರ ಹಾಗೂ ಮಣಿಪುರ ಸರ್ಕಾರಗಳು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರಪತಿ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಅಲ್ಲಿನ ಜನಾಂಗೀಯ ಹಿಂಸೆಯಲ್ಲಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 40 ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ ಎಂದು ದೂರಿದ ಅವರು ಮಣಿಪುರದ ವಿದ್ಯಮಾನಗಳು ಮೋದಿ ಅವರಿಗೆ ಕಾಣುತ್ತಿಲ್ಲವೆ? ಕಂಡರೂ ಏಕೆ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕಿಡಿಕಾರಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾತನಾಡಿ, ಮಣಿಪುರದ ಸಹೋದರಿಯರ ಬೆತ್ತಲೆ ಮೆರವಣಿಗೆ ಮಹಿಳಾ ಸಂಕುಲದ ಆತ್ಮಸ್ಥೈರ್ಯ ಕುಗ್ಗಿಸುವಂಥದ್ದು. ಯಾವ ನಾಗರಿಕ ಸಮಾಜದಲ್ಲಿದ್ದೇವೆ ಎಂಬ ಭಯ ಕಾಡುತ್ತಿದೆ. ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲರಾದ ಮಣಿಪುರದ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಶುಭಮಂಗಳ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಕಾರ್ಯದರ್ಶಿ ಎ. ನಾಗರಾಜ್, ಉತ್ತರ ಕ್ಷೇತ್ರದ ಅಧ್ಯಕ್ಷ ಕೆ.ಜಿ. ಶಿವಕುಮಾರ್, ರಾಜೇಶ್ವರಿ, ದಾಕ್ಷಾಯಣಮ್ಮ, ಬಾಬುರಾವ್ ಸಾಳಂಕಿ, ರುದ್ರಮ್ಮ, ಸುರೇಖಾ, ಯುವರಾಜ್, ಅಲೆಕ್ಸಾಂಡರ್ ಜಾನ್, ರಾಜು ಭಂಡಾರಿ, ಶ್ರೀಕಾಂತ್ ಬಗೇರಾ, ಕವಿತಾ ಚಂದ್ರಶೇಖರ, ಗೀತಾ ಪ್ರಶಾಂತ, ರೇಷ್ಮಾ, ಸತೀಶ್ ಶೆಟ್ಟಿ ಪ್ರತಿಭಟನೆಯಲ್ಲಿ ಇದ್ದರು.