ದಾವಣಗೆರೆ : ಶಾಂತಿ, ಸಹನೆ, ಸಹಬಾಳ್ವೆ ಭಾರತದ ಸ್ವತ್ವವಾಗಿವೆ. ನಮ್ಮ ಭೌಗೋಳಿಕ ಹಿನ್ನೆಲೆ ಹಾಗೂ ಸಂಪನ್ಮೂಲಗಳು ಇದಕ್ಕೆ ಕಾರಣ ಎಂದು ಸಾಹಿತಿ, ಅಂಕಣಕಾರ ಪ್ರೊ. ಪ್ರೇಮಶೇಖರ ಹೇಳಿದರು. ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಶನಿವಾರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ 4 ನೇ ರಾಜ್ಯ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದ ಸಿಂಧು ಮತ್ತು ಗಂಗಾ ನದಿಯ ಬಯಲು ವಿಶಾಲ ಹಾಗೂ ಫಲವತ್ತಾದುದು. ನೀರು, ಆಹಾರದ ಕೊರತೆ ಇರಲಿಲ್ಲ. ಇದರಿಂದ ಹಂಚಿಕೊಳ್ಳುವ ಸ್ವಭಾವ ನಮ್ಮಲ್ಲಿ ಬೆಳೆಯಿತು ಎಂದು ವಿಶ್ಲೇಷಿಸಿದರು. ಸಂಪನ್ಮೂಲಗಳ ತೀವ್ರ ಕೊರತೆ ಇದ್ದ ಪಶ್ಚಿಮ ಮತ್ತು ಮಧ್ಯ ಏಷ್ಯಾದ ನಾಡುಗಳ ಆರ್ಯರು ಸ್ವಾಭಾವಿಕವಾಗಿಯೇ ತಮ್ಮ ಜೀವ ಹಾಗೂ ವಸ್ತುಗಳ ರಕ್ಷಣೆಗಾಗಿ ಕ್ಷಾತ್ರ ಗುಣವನ್ನು ಉಳಿಸಿಕೊಂಡರು. ಹಾಗಾಗಿ ಕೊಲ್ಲುವುದೇ ಅವರ ಸ್ವಂತಿಕೆಯಾಯಿತು. ಯುದ್ಧ, ಕಲಹಗಳಿಗೆ ದಾರಿಯಾಯಿತು. ಅದು ಅವರ ಸಾಹಿತ್ಯ, ಕಲೆಯಲ್ಲೂ ಅಭಿವ್ಯಕ್ತಗೊಂಡಿದೆ ಎಂದು ತಿಳಿಸಿದರು. ಪಾಕಿಸ್ತಾನದವರೂ ನಮ್ಮಿಂದಲೇ ಬೇರ್ಪಟ್ಟು ಹೋದವರು. ಆದರೆ ಪಶ್ಚಿಮ ಏಷ್ಯಾದ ನೀತಿಯು ಪ್ರಭಾವ ಬೀರಿ ಅವರಲ್ಲಿ ಬದಲಾವಣೆಯಾಯಿತು. ಶಾಂತಿಯು ನಮ್ಮ ನೆಲದ ಗುಣವಾದರೆ ಕೊಲ್ಲುವುದೇ ಪಾಕ್‌ನ ಮನೋಭಾವವಾಗಿದೆ ಎಂದು ಇತ್ತೀಚೆಗೆ ಉಭಯ ದೇಶಗಳ ನಡುವೆ ನಡೆದ ಸಂಘರ್ಷದ ಸ್ವರೂಪವನ್ನು ವಿವರಿಸಿದರು. ‘ಶಾಂತಿಯ ಹಾದಿ ಯುದ್ಧದ ಮೂಲಕ ಸಾಗುತ್ತದೆ’ ಎನ್ನುವುದನ್ನು ಇತಿಹಾಸಪೂರ್ವ ಕಾಲದಲ್ಲೇ ನಾವು ಮನಗಂಡಿದ್ದೆವು. ಅದು ಇಂದಿಗೂ ನಮ್ಮ ಸ್ವತ್ವದಲ್ಲಿ ಹಾಸುಹೊಕ್ಕಾಗಿದೆ ಎನ್ನುವುದನ್ನು ‘ಆಪರೇಷನ್ ಸಿಂಧೂರ್’ ಜಗತ್ತಿಗೇ ಮನವರಿಕೆ ಮಾಡಿಕೊಟ್ಟಿದೆ ಎಂದು ಹೇಳಿದರು. ಋಗ್ವೇದದಲ್ಲಿ ಉಲ್ಲೇಖವಾಗಿರುವ ‘ಹತ್ತು ಅರಸರ ಯುದ್ಧ’ ಹಾಗೂ ರಾಮಾಯಣ, ಮಹಾಭಾರತಗಳಲ್ಲಿ ವರ್ಣಿತವಾಗಿರುವ ಭೀಕರ ಯುದ್ಧಗಳು, ಮಹಾಭಾರತದ ದ್ರೋಣ ಪರ್ವದಲ್ಲಿ ಬರುವ ಅಣ್ವಸ್ತ್ರದಂಥ ಸಮರಾಸ್ತ್ರಗಳ ಬಗ್ಗೆ ಕೇಳಿದಾಗ, ನಮ್ಮ ಇತಿಹಾಸದ ಯಾವುದೋ ಹಂತದಲ್ಲಿ ಯುದ್ಧಗಳಲ್ಲಿ ತೊಡಗಬೇಕಾದ, ಅದಕ್ಕಾಗಿ ಬಗೆ ಬಗೆಯ ಶಸ್ತ್ರಾಸ್ತ್ರಗಳನ್ನು ಶೋಧಿಸಬೇಕಾದ ಅನಿವಾರ್ಯತೆಗೆ ನಾವು ಒಳಗಾಗಿದ್ದೆವು ಎನ್ನುವ ಸತ್ಯವನ್ನು ಗುರುತಿಸಬೇಕಾಗುತ್ತದೆ ಎಂದರು. ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ನರೂರ ಸ್ವಾಗತಿಸಿದರು. ಸಮಾರಂಭದಲ್ಲಿ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.