ಜಿಲ್ಲೆ

ಮಳೆ ಅನಾಹುತ ತಡೆಗೆ ತಕ್ಷಣ ಕ್ರಮ ವಹಿಸಿ

ದಾವಣಗೆರೆ : ಮಳೆ ಹಿನ್ನೆಲೆಯಲ್ಲಿ ಸಂಭವಿಸಿದ ರಸ್ತೆ ಸಂಪರ್ಕ ಕಡಿತ, ಶಾಲೆ ಹಾಗೂ ಅಂಗನವಾಡಿ ಸೋರುವಿಕೆ ಮತ್ತು ವಿದ್ಯುತ್ ಸಂಪರ್ಕ ಕಡಿತದ ದುರಸ್ಥಿಯನ್ನು ತಕ್ಷಣವೇ ಕೈಗೊಂಡು ಯಥಾಸ್ಥಿತಿ ನಿರ್ವಹಣೆ ಮಾಡುವಂತೆ ಹಾಗೂ ಮುಂದಿನ ಮೂರು ದಿನಗಳ ಕಾಲ ಕಟ್ಟೆಚ್ಚರ ವಹಿಸುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.  ರಾಜ್ಯದ ಪಶ್ಚಿಮಘಟ್ಟ ಸೇರಿ ಮಲೆನಾಡು, ಕರಾವಳಿಯಲ್ಲಿ ತೀವ್ರ ಮಳೆಯಾಗುತ್ತಿದ್ದು, ಇದರಿಂದ ಬಾಧಿತವಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದರು.  ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ತುಂಗಾ ಮತ್ತು ಭದ್ರಾ ಜಲಾಶಯದಿಂದ ನೀರು ಬಿಟ್ಟಾಗ ಹೊನ್ನಾಳಿ, ಹರಿಹರದ ಕೆಲವು ಭಾಗದಲ್ಲಿ ಪ್ರವಾಹ ಉಂಟಾಗಬಹುದು. ಪ್ರಸ್ತುತ ತುಂಗಾ ನದಿಯಿಂದ ಮಾತ್ರ 80 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ತುಂಗಭದ್ರಾ ಜಲಾಶಯಕ್ಕೆ 1ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಭದ್ರಾ ಜಲಾಶಯ ಭರ್ತಿಯಾಗದ ಕಾರಣ ನೀರು ಬಿಟ್ಟಿರುವುದಿಲ್ಲ ಎಂದರು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿಲ್ಲ. ಈಗಾಗಲೇ ಎಲ್ಲ ಗ್ರಾಪಂವಾರು ಟಾಸ್ಕ್‌ಪೋರ್ಸ್ ಸಮಿತಿ ಸಕ್ರಿಯಗೊಳಿಸಿದ್ದು, ಸಾರ್ವಜನಿಕರಿಗೆ ನದಿ ನೀರಿನ ಮಾಹಿತಿ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ವಿವರಿಸಿದರು.  ಲಕ್ಷಕ್ಕಿಂತ ಅಧಿಕ ಕ್ಯೂಸೆಕ್ ನೀರು ಬಂದಾಗ ಜಿಲ್ಲೆಯ ಕೆಲವು ಕಡೆ ಮಾತ್ರ ಸಮಸ್ಯೆಯಾಗಲಿದ್ದು, ಅಂತಹ ಕಡೆ 44 ಕುಟುಂಬಗಳನ್ನು ಗುರುತಿಸಲಾಗಿದೆ. ಜತೆಗೆ, ವಿಪತ್ತು ನಿರ್ವಹಣಾ ತಂಡವನ್ನು ಸಹ ಸನ್ನದ್ದವಾಗಿಡಲಾಗಿದೆ ಎಂದು ತಿಳಿಸಿದರು.  ರಸ್ತೆ, ಶಾಲೆ, ಅಂಗನವಾಡಿಗಳ ದುರಸ್ತಿಗಾಗಿ ಪ್ರಕೃತಿ ವಿಕೋಪ ನಿಧಿಯಡಿ ಜಿಲ್ಲಾಧಿಕಾರಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಎಲ್ಲೆಲ್ಲಿ ರಸ್ತೆ ಗುಂಡಿ ಬಿದ್ದಿವೆಯೊ ಅಂತಹ ಕಡೆ ಒಂದು ಅಡಿ ಆಳ ತೆಗೆದು ಅದಕ್ಕೆ ಜಲ್ಲಿಕಲ್ಲು ಮತ್ತು ಸಿಮೆಂಟ್ ವೆಟ್ ಮಿಕ್ಸಿಂಗ್ ಹಾಕಿ ತಾತ್ಕಾಲಿಕ ಸರಿಪಡಿಸಬೇಕು. ಶಾಲಾ, ಅಂಗನವಾಡಿಗಳು ಸೋರದಂತೆ ಹೊದಿಕೆ ಹಾಕಲು ಕ್ರಮ ವಹಿಸಿ ತುರ್ತು ಕಾಮಗಾರಿ ಕೈಗೊಂಡು ಮುಂದಿನ 15 ದಿನಗಳಲ್ಲಿ ಬಿಲ್ ಪಾವತಿಸಲು ಸಚಿವರು ಸೂಚಿಸಿದರು.  ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗಳು ಪ್ರತ್ಯೇಕವಾಗಿ ಪ್ರವಾಸ ಕೈಗೊಂಡು ರಸ್ತೆ ದುರಸ್ತಿ, ಶಾಲೆ, ಅಂಗನವಾಡಿ, ವಿದ್ಯುತ್ ಸಂಪರ್ಕ ಕಡಿತ ದುರಸ್ಥಿಯನ್ನು ಸ್ಥಳದಲ್ಲಿದ್ದು ಮಾಡಿಸಬೇಕು, ಪ್ರತಿಯೊಂದು ಕಾಮಗಾರಿಗಳ ವೀಕ್ಷಣೆ ಮಾಡಿದ ನಂತರವೇ ಅದರ ಬಿಲ್ ಪಾವತಿ ಮಾಡಲು ತಿಳಿಸಿದರು.  ಎಸ್‌ಪಿ ಉಮಾ ಪ್ರಶಾಂತ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಎಡಿಸಿ ಪಿ.ಎನ್. ಲೋಕೇಶ್, ಉಪವಿಭಾಗಾಧಿಕಾರಿ ಅಭಿಷೇಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.