ಜಿಲ್ಲೆ

ಇನ್ಸೈಟ್ಸ್ ಸಂಸ್ಥೆಯ ಕೆಪಿಎಸ್‌ಸಿ ಕೋರ್ಸ್ ಉದ್ಘಾಟನೆ 15ಕ್ಕೆ

ರಮೇಶ ಜಹಗೀರದಾರ್

ದಾವಣಗೆರೆ : ನಗರದ ನಿಜಲಿಂಗಪ್ಪ ಬಡಾವಣೆಯ ಎಜು ಏಷ್ಯಾ ಶಾಲೆಯ ಎದುರಿನ ಜಾಧವ್ ಕಾಂಪ್ಲೆಕ್ಸ್‌ನಲ್ಲಿ ಸೆ.15ರಂದು ಇನ್ಸೈಟ್ಸ್ ಸಂಸ್ಥೆಯ ಕೆಪಿಎಸ್‌ಸಿ ಪ್ರಿಲಿಮ್ಸ್ ಕಮ್ ಮೇನ್ಸ್ ಕೋರ್ಸ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ಹೇಳಿದರು.  ಭಾನುವಾರ ಬೆಳಗ್ಗೆ 11 ಗಂಟೆಗೆ ಸರಳ ಪೂಜೆಯೊಂದಿಗೆ ಉದ್ಘಾಟನೆ ನಡೆಯಲಿದ್ದು, ಸೆ.16ರಿಂದ ತರಗತಿಗಳು ಶುರುವಾಗಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಕೆಎಎಸ್ ಕೋರ್ಸ್ 8 ತಿಂಗಳ ಅವಧಿ ಹೊಂದಿದ್ದು, ಇಂಗ್ಲೀಷ್ ಮತ್ತು ಕನ್ನಡ ಬೋಧನಾ ಮಾಧ್ಯಮದಲ್ಲಿ ಇನ್ಸ್ಟಾ ಕೆಎಎಸ್ ಬೆಂಗಳೂರಿನ ಅಧ್ಯಾಪಕರ ತಂಡವು ದಾವಣಗೆರೆಯಲ್ಲಿ ತರಬೇತಿ ನೀಡಲಿದ್ದಾರೆ ಎಂದರು.  ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗೆ ಸಂಯೋಜಿತ ತರಗತಿ ನಡೆಸುವುದಲ್ಲದೆ, ಮುಖ್ಯ ಪರೀಕ್ಷೆಗೆ ಉತ್ತರ ಬರೆಯುವ ಅಭ್ಯಾಸಕ್ಕೆ ಒತ್ತು ನೀಡಲಾಗುವುದು. ಅಧ್ಯಯನ ಸಾಮಗ್ರಿ ಹಾಗೂ ವಿದ್ಯುನ್ಮಾನ ಪ್ರತಿ, ಉಚಿತ ಅನನ್ಯ ಸಾಧನಾ ಪತ್ರಿಕೆ ಒದಗಿಸುವ ಜತೆಗೆ ಉಚಿತ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷಾ ಸರಣಿ ನಡೆಸಲಾಗುತ್ತದೆ ಎಂದು ಹೇಳಿದರು.  ಸೆ.30ರಿಂದ ಐಎಎಸ್ ಕೋರ್ಸ್ ತರಬೇತಿ ಪ್ರಾರಂಭಿಸಲಾಗುವುದು. ದಾವಣಗೆರೆ ಲೋಕಸಭೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದ 10 ಅಭ್ಯರ್ಥಿಗಳಂತೆ 80 ಜನರಿಗೆ ಜನವರಿಯಿಂದ ಉಚಿತ ಐಎಎಸ್ ತರಬೇತಿ ನೀಡಲಾಗುವುದು. ಇದಕ್ಕಾಗಿ ಸ್ಕಾಲರ್‌ಶಿಪ್ ಟೆಸ್ಟ್ ನಡೆಸಲಿದ್ದು, ಬಡಮಕ್ಕಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.  ಅಲ್ಲದೇ ಅಕ್ಟೋಬರ್ ತಿಂಗಳಿಂದ ಪಿಡಿಒ ಸೇರಿ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ನವೋದಯ ಪರೀಕ್ಷೆಗೆ ಸುಮಾರು 50 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದರು.  ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಬಹಳಷ್ಟು ಜನ ಧಾರವಾಡಕ್ಕೆ ಹೋಗುತ್ತಿದ್ದು, ಮಧ್ಯ ಕರ್ನಾಟಕದ ವಿದ್ಯಾಕಾಶಿ ದಾವಣಗೆರೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಹಬ್ ಮಾಡುವ ಅಭಿಲಾಷೆ ಹೊಂದಲಾಗಿದೆ ಎಂದು ಹೇಳಿದರು. ಶರತ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.