ದಾವಣಗೆರೆ : ಕೇಶ ಶೃಂಗಾರ ಮಾಡಿ ವ್ಯಕ್ತಿಯು ಸುಂದರವಾಗಿ ಕಾಣುವಂತೆ ಮಾಡುವ ಸವಿತಾ ಸಮಾಜದವರ ಕ್ಲೇಶಗಳಿಗೆ ಪರಿಹಾರ ಸಿಕ್ಕಿಲ್ಲ. ಶುಭ ಕಾರ್ಯಗಳಲ್ಲಿ ಮಂಗಲ ವಾದ್ಯ ನುಡಿಸುವ ಕಲಾವಿದರ ಕುಶಲ ಕೇಳುವವರಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಸವಾಲು ಇವರ ಮುಂದಿದೆ. ಮದುವೆ, ಜವಳ, ಉಪನಯನದಿಂದ ಹಿಡಿದು ಸಾವಿನ ಮನೆಯ ವರೆಗೂ ಇವರ ಸೇವೆಯನ್ನು ಸಮಾಜ ಬಯಸುತ್ತದೆ. ಆದರೆ ಜನರು ಇವರನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಈ ಸಮಾಜಕ್ಕೆ ಸರ್ಕಾರದ ಸೌಲಭ್ಯಗಳು ಹೆಚ್ಚಾಗಿ ಸಿಗಬೇಕಿದೆ. ವಿಜಯವಾಣಿ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಸವಿತಾ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಎನ್. ರಂಗಸ್ವಾಮಿ, ಕಾರ್ಯದರ್ಶಿ ಜಿ.ಎಸ್. ಪರಶುರಾಮ್, ಖಜಾಂಚಿ ಆರ್. ಕರಿಬಸಪ್ಪ ತಮ್ಮ ಸಮಾಜದ ಸ್ಥಿತಿಗತಿ, ಎದುರಿಸುತ್ತಿರುವ ಸವಾಲುಗಳ ಕುರಿತು ವಿಚಾರಗಳನ್ನು ಹಂಚಿಕೊಂಡರು. ಜಿಲ್ಲೆಯಲ್ಲಿ 1 ಸಾವಿರಕ್ಕೂ ಹೆಚ್ಚು ಕ್ಷೌರದ ಅಂಗಡಿಗಳಿದ್ದು (ಕಟಿಂಗ್ ಸಲೂನ್) ಸಮಾಜದ ಜನಸಂಖ್ಯೆ 12 ಸಾವಿರದಷ್ಟಿದೆ. ದಾವಣಗೆರೆ ನಗರದಲ್ಲಿ 434 ಅಂಗಡಿಗಳಿವೆ. ಪೀಳಿಗೆಯಿಂದ ಪೀಳಿಗೆಗೆ ವೃತ್ತಿಯನ್ನು ಮುಂದುವರಿಸಿಕೊಂಡು ಬರಲಾಗಿದೆ. ಆದರೆ ಈಗಿನ ಕಾಲಮಾನದಲ್ಲಿ ಪರಿಸ್ಥಿತಿ ಮೊದಲಿನಂತಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ‘ಸ್ಪಾ’ಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿದೆ. ದೆಹಲಿ, ಬಿಹಾರ, ಉತ್ತರ ಪ್ರದೇಶ, ನೇಪಾಳ ಮುಂತಾದ ಕಡೆಗಳಿಂದ ಬಂದ ಕೆಲಸಗಾರರು ಇಲ್ಲಿ ನೆಲೆ ನಿಂತಿದ್ದಾರೆ. ಜನರು ಅವುಗಳ ಆಕರ್ಷಣೆಗೆೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಸವಿತಾ ಸಮಾಜದವರ ಕುಲಕಸುಬಿಗೆ ಪೆಟ್ಟು ಬಿದ್ದಿದೆ. ಬೇರೆ ವೃತ್ತಿಗಳನ್ನು ಹುಡುಕಿಕೊಂಡು ಹೋಗುವಂತಾಗಿದೆ. ಇರುವ ಅಂಗಡಿಗಳಲ್ಲಿ ಕೆಲಸಗಾರರು ಸಿಗುತ್ತಿಲ್ಲ. ಸವಿತಾ ಸಮಾಜ ಪ್ರವರ್ಗ 2ಎ ಮೀಸಲಾತಿಯಡಿ ಬರುತ್ತದೆ. ಇದರ ಅಡಿಯಲ್ಲಿ 25 ಉಪ ಪಂಗಡಗಳು ಬರುತ್ತವೆ. ಈ ಸಮಾಜವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವುದು ಹಳೆಯ ಬೇಡಿಕೆ. ಇದಕ್ಕಾಗಿ ಅನೇಕ ಹೋರಾಟಗಳೂ ಆಗಿವೆಯಾದರೂ ಇದುವರೆಗೂ ಈಡೇರಿಲ್ಲ. ಈ ಸಮಾಜದವರು ಸಾಮಾಜಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಸಂದರ್ಭಗಳಲ್ಲಿ ಬಹಿಷ್ಕಾರ ಎದುರಿಸಿದ ಉದಾಹರಣೆಗಳೂ ಇವೆ. ನಗರಗಳಲ್ಲಿ ಅಂಗಡಿ ತೆರೆಯಲು ಮಳಗೆಗಳು ಬಾಡಿಗೆಗೆ ಸಿಗುತ್ತಿಲ್ಲ. ವಸತಿ ಪ್ರದೇಶಗಳಲ್ಲೂ ನಮ್ಮನ್ನು ನೋಡುವ ದೃಷ್ಟಿಕೋನವೇ ಬೇರೆ ಎಂದು ರಂಗಸ್ವಾಮಿ ಅಳಲು ತೋಡಿಕೊಂಡರು. ಆರ್ಥಿಕವಾಗಿಯೂ ಸಮಾಜ ಬಹಳಷ್ಟು ಹಿಂದುಳಿದಿದೆ. ಸಮಾಧಾನದ ಸಂಗತಿ ಎಂದರೆ ಸಮಾಜದವರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡುತ್ತಿದ್ದಾರೆ. ವೈದ್ಯಕೀಯ, ಇಂಜಿನಿಯರಿಂಗ್‌ನಂಥ ವೃತ್ತಿಪರ ಕೋರ್ಸ್‌ಗಳನ್ನು ಮಾಡಿಸುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಂತೂ ನಿರ್ಲಕ್ಷೃಕ್ಕೆ ಒಳಗಾಗಿದೆ. ಪುರಸಭೆ, ನಗರಸಭೆಯಂಥ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ವಿಧಾನಸಭೆ, ವಿಧಾನ ಪರಿಷತ್ತಿನ ವರೆಗೆ ಈ ಸಮಾಜಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಸಮುದಾಯದ ಶಾಸಕ ಅಥವಾ ಎಂಎಲ್ಸಿ ಯಾರೂ ಇಲ್ಲ. ಸವಿತಾ ಅಭಿವೃದ್ಧಿ ನಿಗಮಕ್ಕೂ ಹೆಚ್ಚು ಅನುದಾನ ದೊರೆಯುತ್ತಿಲ್ಲ. ಸವಿತಾ ಮಹರ್ಷಿಗಳು ಈ ಸಮಾಜದ ಮೂಲ ಪುರುಷ. ಆಂಜನೇಯ ಮತ್ತು ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸುತ್ತಾರೆ. ಬಹುತೇಕ ತೆಲುಕು ಇವರ ಮಾತೃಭಾಷೆ. ... (ಬಾಕ್ಸ್) ಸಮುದಾಯ ಭವನದ ಕನಸು ನಗರದಲ್ಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 1974 ರಲ್ಲಿ ನಿವೇಶನ ಮಂಜೂರಾಯಿತಾದರೂ ಇಷ್ಟು ವರ್ಷಗಳ ಕಾಲ ಅಲ್ಲಿ ಕಟ್ಟಡ ನಿರ್ಮಿಸಲು ಆಗಿರಲಿಲ್ಲ. ಈಗ ಒಂದು ಹಂತಕ್ಕೆ ಬಂದಿದೆ. ಸಮುದಾಯ ಭವನದ ಒಟ್ಟು ಯೋಜನಾ ವೆಚ್ಚ 2.23 ಕೋಟಿ ರೂ. ಇದುವರೆಗೆ 1.60 ಕೋಟಿ ರೂ. ಖರ್ಚಾಗಿದೆ. ಇನ್ನೂ 60 ರಿಂದ 70 ಲಕ್ಷ ರೂ.ಗಳ ಅಗತ್ಯವಿದೆ. ನಗರಸಭೆಯಿಂದ 1972 ರಲ್ಲಿ ಸಮಾಜದ ಹಾಸ್ಟೆಲ್ ನಿರ್ಮಾಣಕ್ಕೆ ನಿವೇಶನ ಮಂಜೂರಾಯಿತು. ಇದುವರೆಗೆ ಅಲ್ಲಿ ವಸತಿನಿಲಯ ನಿರ್ಮಿಸಲು ಸಾಧ್ಯವಾಗಿಲ್ಲ.
...
(((ಬೇಡಿಕೆಗಳು)))
* ಸವಿತಾ ಅಭಿವೃದ್ಧಿ ನಿಗಮಕ್ಕೆ ಹೆಚ್ಚು ಅನುದಾನ ಬಿಡುಗಡೆಯಾಗಬೇಕು
* ಸಮುದಾಯವನ್ನು ಎಸ್ಸಿ ಅಥವಾ ಎಸ್ಟಿಗೆ ಸೇರ್ಪಡೆ ಮಾಡಬೇಕು, ಇಲ್ಲವೇ ಒಳಮೀಸಲಾತಿ ನೀಡಬೇಕು
* ಸಮುದಾಯದವರನ್ನು ಜಾತಿನಿಂದನೆ ಮಾಡಿದರೆ ಅಟ್ರಾಸಿಟಿ ಕೇಸ್ ಹಾಕುವ ಕಾನೂನು ಜಾರಿಗೆ ತರಬೇಕು
* ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು
...
((ಕೋಟ್))
ನಮ್ಮ ಸಮಾಜ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದೆ. ಜನರು ಅಸ್ಪಶ್ಯತೆಯ ಭಾವನೆಯಿಂದ ನಮ್ಮನ್ನು ನೋಡುತ್ತಾರೆ. ಆದರೆ ಎಲ್ಲ ಶುಭ ಕಾರ್ಯಗಳಿಗೂ ನಾವು ಬೇಕು. ಹೊರಗಿನ ಜನರು ಬಂದು ಇಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಇದರಿಂದ ನಮಗೆ ದುಡಿಮೆ ಇಲ್ಲದಂತಾಗಿದೆ. ಸರ್ಕಾರ ನಮ್ಮ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು.
ಬಿ. ಬಾಲರಾಜ ಉಪ್ಪಲ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ