ಜಿಲ್ಲೆ

ವಾಣಿಜ್ಯ ಕಟ್ಟಡಗಳ ಪಾರ್ಕಿಂಗ್‌ಗೆ ಗಡುವು

Davanagere

ದಾವಣಗೆರೆ: ಪಾರ್ಕಿಂಗ್‌ಗೆ ಜಾಗ ಬಿಡದ ಬಹುಮಹಡಿ ವಾಣಿಜ್ಯ ಸಂಕೀರ್ಣಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಭೆಯಲ್ಲಿ ಮಾತನಾಡಿ, ಪಾರ್ಕಿಂಗ್ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದಲ್ಲಿ, ಒತ್ತುವರಿ ಮಾಡಿದ್ದಲ್ಲಿ ತಕ್ಷಣವೆ ತೆರವುಗೊಳಿಸಿಕೊಳ್ಳಬೇಕು ಎಂದು ಸೂಚಿಸಿದರು.

ವಾರದಲ್ಲೆ ಈ ಸಂಬಂಧ ಅಭಿಯಾನ ನಡೆಸಲಾಗುವುದು. ಪಾಲಿಕೆ ವ್ಯಾಪ್ತಿಯ ಇಂತಹ ಕಟ್ಟಡಗಳನ್ನು ಗುರುತಿಸಿಕೊಳ್ಳಬೇಕು. ಕಟ್ಟಡ ಮಾಲೀಕರಿಗೆ ಇದುವೇ ಬಹಿರಂಗ ನೋಟಿಸ್ ಆಗಿದೆ. ಮೌನ ವಹಿಸಿದರೆ ಅಧಿಕಾರಿಗಳೇ ತೆರವುಗೊಳಿಸುವರು ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದರು. ಅಲ್ಲದೆ ದಂತ ವೈದ್ಯಕೀಯ ಕಾಲೇಜು ರಸ್ತೆಯಲ್ಲಿ ಕೆಲವು ವಾಣಿಜ್ಯ ಮಳಿಗೆಗಳಿಂದಾಗಿ ರಸ್ತೆ ಮೇಲೆ ವಾಹನಗಳ ನಿಲುಗಡೆಯಾಗುತ್ತಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸಂಚಾರಿ ಪೊಲೀಸರಿಗೆ ಹೊರೆಯಾಗುತ್ತಿದೆ. ಮಳಿಗೆದಾರರೆ ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳಲು ಆದೇಶಿಸಬೇಕೆಂದು ಮನವಿ ಮಾಡಿದರು.

ಮಾದರಿ ರಸ್ತೆ ನಿರ್ಮಾಣ: ಪೂರ್ವವಲಯದ ಮಹಾ ನಿರೀಕ್ಷಕರ ಸೂಚನೆಯಂತೆ ಸಂಚಾರ ದಟ್ಟಣೆ ನಿಯಂತ್ರಿಸುವ ಮೂಲಕ ದಂತ ವೈದ್ಯಕೀಯ ಕಾಲೇಜು ರಸ್ತೆಯನ್ನು ಮಾದರಿ ರಸ್ತೆಯಾಗಿ ಮಾರ್ಪಡಿಸುವ ಯೋಜನೆ ಇದೆ. ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯ ಮಳಿಗೆಯವರು ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಈ ಸಂಬಂಧ ಪ್ರತ್ಯೇಕ ಸಬೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.

ರಿಫ್ಲೆಕ್ಟರ್ ಅಳವಡಿಕೆ ಕಡ್ಡಾಯ: ಟ್ರಾೃಕ್ಟರ್, ಲಾರಿ ಮೊದಲಾದ ಭಾರೀ ಗಾತ್ರದ ವಾಹನಗಳು ರಾತ್ರಿ ವೇಳೆ ಅಪಘಾತ ತಡೆಗಟ್ಟುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ರಿಫ್ಲೆಕ್ಟರ್ ಅಂಟಿಸಿಕೊಳ್ಳಬೇಕು ಎಂದು ಆರ್‌ಟಿಒ ಶ್ರೀಧರ್ ಮಲ್ಲಾಡ ಹೇಳಿದರು. ಈ ಸಂಬಂಧ ಲಾರಿ ಮಾಲೀಕರ ಸಂಘದವರು ಅಭಿಯಾನ ನಡೆಸುವಂತೆ ಎಸ್ಪಿ ಸೂಚಿಸಿದರು. ರಸ್ತೆ ಸುರಕ್ಷತಾ ಸಪ್ತಾಹ ಸಂದರ್ಭದಲ್ಲೂ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.

ಡಬಲ್ ಟ್ರಾೃಲರ್‌ಗಳಲ್ಲಿ ಕೆಲವು ಕಬ್ಬಿನ ಲಾರಿಗಳು ಕಬ್ಬು ಸಾಗಣೆ ಮಾಡುವಾಗ ವಾಹನ ಸವಾರರಿಗೆ ಅರಿವಿಗೆ ಬರುವುದಿಲ್ಲ. ರಾತ್ರಿ ವೇಳೆ ವಾಹನದ ಹಿಂಬದಿಗೆ ಕೆಂಪು ದೀಪಗಳನ್ನು ಅಳವಡಿಸುವುದು ಸೂಕ್ತ ಎಂದು ರೆಡ್‌ಕ್ರಾಸ್‌ನ ಸಾಗರ್ ಸಲಹೆ ನೀಡಿದಾಗ , ಕ್ರಮ ವಹಿಸಲು ಆರ್‌ಟಿಒಗೆ ಡಿಸಿ ಸೂಚಿಸಿದರು.

ವಾಹನಗಳು ತಾಡಪಾಲು ಹೊದಿಸದೇ ಎಂ.ಸ್ಯಾಂಡ್ ಸಾಗಿಸುತ್ತಿದ್ದು, ಅಪಘಾತಕ್ಕೆ ದಾರಿ ಮಾಡುತ್ತಿವೆ. ಮೋಟಾರು ವಾಹನಗಳ ಉಲ್ಲಂಘನೆಯಾದ ಪ್ರಕರಣಗಳ ದಂಡ ಕಟ್ಟಲು ಕೆಲವು ತಾಲೂಕಿನಲ್ಲಿ ಸಮಸ್ಯೆ ಇದೆ ಎಂದು ಎಂ.ಜಿ.ಶ್ರೀಕಾಂತ್ ಹೇಳಿದರು. ದಂಡದ ಮೊತ್ತವನ್ನು ಸಮೀಪದ ಯಾವುದೇ ಠಾಣೆಗೆ ಕಟ್ಟಬಹುದು ಎಂದು ಎಸ್ಪಿ ತಿಳಿಸಿದರು.

ವಿದ್ಯಾರ್ಥಿ ಭವನದಿಂದ ಹದಡಿ ರಸ್ತೆಯವರೆಗೆ ಒಂದೂ ಬೀದಿ ದೀಪಗಳಿಲ್ಲ. ವಸತಿ ಪ್ರದೇಶವಾದ ಪಿ.ಜೆ.ಬಡಾವಣೆಯಲ್ಲಿ ಖಾಸಗಿ ಕ್ಲಿನಿಕ್‌ಗಳು ವ್ಯಾಪಕವಾಗಿದ್ದು ಎಲ್ಲೆಂದರಲ್ಲಿ ವಾಹನ ನಿಲುಗಡೆಯಾಗುತ್ತಿದೆ. ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಕೆ.ಡಿ. ದೀಕ್ಷಿತ್ ಇತರರು ಆಕ್ಷೇಪಿಸಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಇತರರಿದ್ದರು.