ಜಿಲ್ಲೆ

ಸಂಸ್ಕೃತಿಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ

ರಮೇಶ ಜಹಗೀರದಾರ್

ದಾವಣಗೆರೆ : ಶಿಕ್ಷಣದ ಜತೆಗೆ ಸಂಸ್ಕೃತಿ ಹಾಗೂ ಸಾಮಾನ್ಯ ಜ್ಞಾನ ಬೆಳಸಿಕೊಂಡಾಗ ಮಾತ್ರ ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗು ದೂರವಾಗಲು ಸಾಧ್ಯ ಎಂದು ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ್ ಹೇಳಿದರು.
 ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜು ಸಮಾಜಶಾಸ್ತ್ರ ವಿಭಾಗ ಹಾಗೂ ಲೋಕಾಯುಕ್ತ ಸಹಯೋಗದಲ್ಲಿ ನಗರದ ಕಾಲೇಜಿನ ಆವರಣದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಸಾಕ್ಷರತೆಯಿಂದ ಭ್ರಷ್ಟಾಚಾರ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂಬುದು ತಪ್ಪು ಕಲ್ಪನೆೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೆ ಬಹಳಷ್ಟು ಭ್ರಷ್ಟಾಚಾರ ನಡೆಸುತ್ತಿದ್ದು, ಸೈಬರ್ ಕ್ರೈಂಗಳ ಮೂಲಕ ಲೂಟಿ ಹೊಡೆಯುತ್ತಿದ್ದಾರೆ ಎಂದು ಘಟನೆಯೊಂದನ್ನು ಉದಾಹರಿಸಿದರು.
 ಇಂದಿನ ಯುವಕರಲ್ಲಿ ದಿಢೀರ್ ದೊಡ್ಡ ಶ್ರೀಮಂತರಾಗಬೇಕು ಎಂಬ ಮನೋಭಾವ ಇದೆ. ವಯಸ್ಸು, ಅಧಿಕಾರ ಹಾಗೂ ಸಂಪತ್ತು ಶಾಶ್ವತವಲ್ಲ. ಇದನ್ನು ಅರ್ಥ ಮಾಡಿಕೊಂಡು ನಡೆದಾಗ ಭ್ರಷ್ಟಾಚಾರ ತೊಡೆದು ಸಾರ್ಥಕ ಜೀವನ ನಡೆಸಬಹುದು ಎಂದರು.
 ಕರ್ನಾಟಕ ಲೋಕಾಯುಕ್ತವು ಪ್ರಪಂಚದಲ್ಲಿಯೆ ಪ್ರಧಾನ ಸಂಸ್ಥೆಯಾಗಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಲೋಕಾಯುಕ್ತ ಕಾಯ್ದೆ ಒಳಗೊಂಡಂತೆ ಎರಡರಲ್ಲೂ ಕಾರ್ಯನಿರ್ವಹಿಸುತ್ತಿದೆ. ಲಂಚ ಪ್ರಕರಣಗಳ ಕುರಿತು ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು ಹಾಗೂ ಎಲ್ಲಾದರೂ ದುರಾಡಳಿತ ಕಂಡುಬಂದರೆ ನೇರ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
 ಭಾರತೀಯ ದಂಡ ಸಂಹಿತೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಂಶಗಳು ಬಸವಣ್ಣನವರ ವಚನಗಳಲ್ಲಿವೆ ಎಂಬುದನ್ನು ವಚನಗಳ ಮೂಲಕ ಉದಾಹರಿಸಿದ ಅವರು, ಇವನ್ನು  ಜೀವನದಲ್ಲಿ ಅನುಸರಿಸಿ ನಡೆದರೆ ಅಭಿವೃದ್ಧಿಯ ಕಡೆಗೆ ಮುನ್ನಡೆಯಲು ಸಾಧ್ಯ ಎಂದರು.
 ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭು ಸೂರಿನ ಮಾತನಾಡಿ, ಬೆಂಗಳೂರು ಹೊರತುಪಡಿಸಿದರೆ ದಾವಣಗೆರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಲವಾರು ಸಾಕ್ಷಾೃಧಾರ ಸಮೇತ ಬಂದು ಪ್ರಕರಣ ದಾಖಲಿಸುವುದು ಭ್ರಷ್ಟಾಚಾರ ಕುರಿತು ಜನರಲ್ಲಿರುವ ಜಾಗೃತಿ ತೋರಿಸುತ್ತದೆ ಎಂದು ಹೇಳಿದರು.
 ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಕಾಲೇಜಿನ ಪ್ರಾಚಾರ್ಯೆ ಪ್ರೊ.ಜಿ.ಸಿ. ನೀಲಾಂಬಿಕೆ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್. ರಾಘವೇಂದ್ರ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ. ಮಂಜಪ್ಪ ನಿರೂಪಿಸಿದರು.