ದಾವಣಗೆರೆ : ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಡೀನ್ ಪ್ರೊ. ಯು.ಎಸ್. ಮಹಾಬಲೇಶ್ವರ ಹೇಳಿದರು. ಬಿ.ಎಸ್. ಚನ್ನಬಸಪ್ಪ ಪ್ರಥಮದರ್ಜೆ ಕಾಲೇಜು ವತಿಯಿಂದ ನಗರದ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ, ರಾಜ್ಯಮಟ್ಟದ ಮ್ಯಾನೇಜ್‌ಮೆಂಟ್ ಮತ್ತು ತಂತ್ರಜ್ಞಾನ ಉತ್ಸವ ‘ಆಕಾಂಕ್ಷಾ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಕ ಗಳಿಕೆಯೊಂದೇ ಮುಖ್ಯವಲ್ಲ, ಜ್ಞಾನ ಸಂಪಾದನೆ ಮಾಡುವ ಜತೆಗೆ ಸಂಸ್ಕಾರಯುತ ಜೀವನವನ್ನು ಕಟ್ಟಿಕೊಳ್ಳಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಭಾಗವಹಿಸಬೇಕು ಎಂದು ತಿಳಿಸಿದರು. ಬದ್ಧತೆ, ಪರಿಶ್ರಮ ಮತ್ತು ಸಮಯ ಪಾಲನೆಯಿಂದ ಯಶಸ್ಸು ಲಭಿಸುತ್ತದೆ. ಯುವಜನರು ಮೊಬೈಲ್ ವ್ಯಸನದಿಂದ ಮುಕ್ತರಾಗಬೇಕು. ಮೌಲ್ಯಯುತ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜು ಅಧ್ಯಕ್ಷ ಎ.ಕೆ. ಪ್ರಶಾಂತ್ ಮಾತನಾಡಿ, ಯುವಜನರಲ್ಲಿ ಸಾಮರ್ಥ್ಯವಿದೆ, ಅದನ್ನು ನಕಾರಾತ್ಮಕ ವಿಷಯಗಳಿಗೆ ಉಪಯೋಗಿಸಬಾರದು ಎಂದು, ಇತ್ತೀಚೆಗೆ ನೇಪಾಳದಲ್ಲಿ ಯುವಜನರು ಸರ್ಕಾರದ ವಿರುದ್ಧ ದಂಗೆ ಎದ್ದ ಪ್ರಕರಣವನ್ನು ಪ್ರಸ್ತಾಪಿಸಿದರು. ಎಸ್.ಬಿ.ಸಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಷಣ್ಮುಖ, ಬಿಎಸ್‌ಸಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ. ಎಂ.ಸಿ. ಗುರು, ಪ್ರಾಚಾರ್ಯೆ ಡಯಾನಾ ದಿವ್ಯಾ, ಮುಖ್ಯ ಶಿಕ್ಷಕಿ ದೀಪಾ ಬಾತಿ ಇದ್ದರು. ಚಂದನಾ ಪ್ರಾರ್ಥಿಸಿದರು. ಶ್ರದ್ಧಾ ವಿ. ಶೇಟ್ ಸ್ವಾಗತಿಸಿದರು, ಬಿ.ವಿ. ಮೇಘಾ ವಂದಿಸಿದರು. ಟಿ.ಎಸ್. ಸಾನಿಯಾ ಕಾರ್ಯಕ್ರಮ ನಿರೂಪಿಸಿದರು. ಎರಡು ದಿನಗಳ ಈ ಉತ್ಸವದಲ್ಲಿ ಒಟ್ಟು 7 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.