ದಾವಣಗೆರೆ : ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯವನ್ನು ರಾಜ್ಯದ ಮಾದರಿ ಕಾಲೇಜಾಗಿ ಅಭಿವೃದ್ಧಿಪಡಿಸಲು ರೂಪುರೇಶೆ ಸಿದ್ಧಪಡಿಸುವಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಹಳೆಯ ವಿದ್ಯಾರ್ಥಿಗಳ ಸಂಘದಿಂದ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಕಲಾ ಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿ.ಸು. ಕೃಷ್ಣ ಸೆಟ್ಟಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಕಾಲ ಕಾಲಕ್ಕೆ ಸಭೆಗಳನ್ನು ಮಾಡಿ ಸಲಹೆಗಳನ್ನು ನೀಡಿದರೆ ತಾವೂ ಸಹಕಾರ ನೀಡುವುದಾಗಿ ತಿಳಿಸಿದರು. ಕಲಾವಿದರು ಸಮಾಜದ ಕನ್ನಡಿ ಇದ್ದಂತೆ. ಶಾಲೆ, ಕಾಲೇಜುಗಳಲ್ಲಿ ಕಾರ್ಯಾಗಾರ ಮಾಡಿ ಯುವಜನರಲ್ಲಿ ಕಲಾಸಕ್ತಿ ಬೆಳೆಸಬೇಕು. ಮೊಬೈಲ್ ಗೀಳಿಗೆ ಅಂಟಿಕೊಂಡಿರುವ ಇಂದಿನ ಪೀಳಿಗೆಯವರನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಹೇಳಿದರು. ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಮಾತನಾಡಿ, ಕಲಾ ಶಾಲೆಯ ಬೋರ್ಡ್ ಆಫ್ ಸ್ಟಡೀಸ್‌ನಲ್ಲಿ ಹಳೇ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು. ಕಲೆಗೆ ಸಂಬಂಧಿಸಿದಂತೆ ಶಾಶ್ವತ ಪ್ರದರ್ಶನ ಹಾಲ್ ನಿರ್ಮಾಣ ಮಾಡಬೇಕು. ಇದಕ್ಕೆ ಹಳೇ ವಿದ್ಯಾರ್ಥಿಗಳ ಜತೆಗೆ ಜನಪ್ರತಿನಿಧಿಗಳ ಸಹಕಾರವೂ ಬೇಕಾಗುತ್ತದೆ ಎಂದರು. ರಾಜ್ಯಮಟ್ಟದಲ್ಲಿ ಕಲಾ ಶಿಕ್ಷಕರ ನೇಮಕವಾಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಹಳೆಯ ವಿದ್ಯಾರ್ಥಿಗಳು ಮಾಡಬೇಕು, ಇದಕ್ಕೆ ಎಲ್ಲರ ಸಹಕಾರವೂ ಬೇಕು ಎಂದು ಹೇಳಿದರು. ಏಪ್ರಿಲ್, ಮೇ ತಿಂಗಳಲ್ಲಿ ವಜ್ರ ಮಹೋತ್ಸವದ ಸಮಾರೋಪ ಸಮಾರಂಭಕ್ಕೆ ದೇಶದ ವಿವಿಧ ಭಾಗಗಳಿಂದ ಉತ್ತಮ ಕಲಾವಿದರು ಭಾಗವಹಿಸುವಂತೆ ಮಾಡುವ ಚಿಂತನೆಯಿದೆ ಎಂದು ತಿಳಿಸಿದರು. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚಿ.ಸು. ಕೃಷ್ಣ ಸೆಟ್ಟಿ ಮಾತನಾಡಿ, ಕಾಲೇಜಿನ ಒಂದು ಇಂಚು ಜಾಗವನ್ನೂ ಬಿಟ್ಟು ಕೊಡುವುದಿಲ್ಲ ಎಂದು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು. ವಜ್ರ ಮಹೋತ್ಸವ ಭವನ ಆಗಬೇಕು. ಶಿಕ್ಷಕರ ಸೇವೆ ಕಾಯಂ ಮಾಡಬೇಕು. ಅಂತಾರಾಷ್ಟ್ರೀಯ ಕಲಾವಿದರನ್ನು ಒಳಗೊಂಡು ಸಲಹಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ್ ಎಂ. ಚಿಕ್ಕಪಾಟೀಲ, ವಜ್ರ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಗಣಪತಿ ಎಸ್. ಹೆಗಡೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ವಾಘ್ಮೋರೆ, ಖಜಾಂಚಿ ಗೋಪಾಲಕೃಷ್ಣ ಮನುವಾಚಾರ್ಯ ಇದ್ದರು. ಇಂದ್ರ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ... (ಬಾಕ್ಸ್) ಡಿಸಿ, ಎಸ್ಪಿ ಮನೆಗೆ ಜಾಗ ನೀಡಲ್ಲ ದೃಶ್ಯಕಲಾ ಮಹಾವಿದ್ಯಾಲಯದ ಜಾಗವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿವಾಸಗಳ ನಿರ್ಮಾಣಕ್ಕೆ ನೀಡುವುದಿಲ್ಲ. ಈ ಬಗ್ಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಕಲಾ ಶಾಲೆಯ ಜಾಗ ಉಳಿಸಲು ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಡಾ. ಶಾಮನೂರು ಶಿವಶಂಕರಪ್ಪ ಅವರು ಸಹಕಾರ ನೀಡುತ್ತ ಬಂದಿದ್ದಾರೆ. ಜಾಗ ಹೋಗುತ್ತದೆ ಎನ್ನುವ ಆತಂಕ ಬೇಡ ಎಂದರು. ...