ಜಿಲ್ಲೆ

ಮಷಿನ್ ಲರ್ನಿಂಗ್ ಬಗ್ಗೆ ಅರಿವು ಅಗತ್ಯ

ರಮೇಶ ಜಹಗೀರದಾರ್

ದಾವಣಗೆರೆ : ಮಷಿನ್ ಲರ್ನಿಂಗ್ ಬಗ್ಗೆ ಅರಿವು ಮತ್ತು ಜ್ಞಾನ ಎಲ್ಲ ವಿಭಾಗದ ಉಪನ್ಯಾಸಕರಿಗೆ ಅವಶ್ಯಕವಾಗಿದೆ ಎಂದು ನಗರದ ಬಾಪೂಜಿ ಎಂಬಿಎ ಕಾಲೇಜಿನ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ ಹೇಳಿದರು.
 ಇಲ್ಲಿನ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ, ಮಷಿನ್ ಲರ್ನಿಂಗ್ ವಿಷಯದ ಕುರಿತ ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಾಗಾರದಲ್ಲಿ ಮಾತನಾಡಿದರು.
 ಪ್ರಚಲಿತ ವಿದ್ಯಮಾನದ ಪ್ರಕಾರ ಜಾಗತಿಕ ಮಟ್ಟದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನ ಬಳಕೆ ಎಲ್ಲ ಉದ್ಯಮಗಳಲ್ಲಿ ಛಾಪು ಮೂಡಿಸುತ್ತಿದೆ. ಮುಂದಿನ ದಿನಗಳಲ್ಲಿ ವಿವಿಧ ಕೋರ್ಸ್‌ಗಳಲ್ಲಿ ಮಷಿನ್ ಲರ್ನಿಂಗ್ ವಿಷಯವು ಅವಿಭಾಜ್ಯ ಅಂಗವಾಗುವುದು ಎಂದು ಅಭಿಪ್ರಾಯಪಟ್ಟರು.
 ಈ ಕಾರ್ಯಾಗಾರದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ನಗರದ ವಿವಿಧ ಕಾಲೇಜುಗಳ ಉಪನ್ಯಾಸಕರೂ ಸೇರಿ 30 ಕ್ಕೂ ಹೆಚ್ಚು ಜನರು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಪ್ರಸ್ತುತ ಕಾರ್ಯಾಗಾರವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಷಿನ್ ಲರ್ನಿಂಗ್‌ನ ವಿವಿಧ ಸಂಗತಿಗಳನ್ನು ತಿಳಿಯಲು ಮತ್ತು ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಬಹಳ ಉಪಯೋಗಕಾರಿಯಾಗಿತ್ತು ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.
 ಬೆಂಗಳೂರಿನ ನ್ಯೂ ಹಾರಿಜನ್ ಕಾಲೇಜಿನ ಎಐ ಮತ್ತು ಮಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥೆ ಡಾ. ಉಮಾ ರೆಡ್ಡಿ, ಸಹ ಪ್ರಾಧ್ಯಾಪಕರಾದ ಡಾ. ಶ್ರೀಜಿತ್ ಮತ್ತು ರಾಜಶ್ರೀ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟರು.