ದಾವಣಗೆರೆ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗುರುವಾರ ಹರ್‌ಘರ್ ತಿರಂಗಾ, ಹರ್‌ಘರ್ ಸ್ವಚ್ಛತಾ ಅಭಿಯಾನದಡಿ ನೀರು ಮತ್ತು ನೈರ್ಮಲ್ಯ ಕುರಿತು ಅರಿವು ಮೂಡಿಸಲಾಯಿತು. ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯಗಳ ಜಂಟಿ ಸಹಯೋಗದಲ್ಲಿ ಹರ್‌ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯದ ಉತ್ಸವ ಆಚರಣೆ ಎಂಬ ಘೋಷ ವಾಕ್ಯದೊಂದಿಗೆ ಆ. 8 ರಿಂದ 15 ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ತಿಳಿಸಿದರು. ನಾಗರಿಕರಲ್ಲಿ ಒಗ್ಗಟ್ಟಿನ ಮನೋಭಾವ ಬೆಳೆಸುವುದು, ಸ್ವಾತಂತ್ರ್ಯದ ಸಾರ, ಸ್ವಚ್ಛತೆ ಗುರಿಯೊಂದಿಗೆ ಸಂಯೋಜಿಸುವುದು. ನೀರು, ನೈರ್ಮಲ್ಯ ಮತ್ತು ಶುಚಿತ್ವ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರು, ಸುಸ್ಥಿರ ನೈರ್ಮಲ್ಯ ಮತ್ತು ಸುಧಾರಿತ ಶುಚಿತ್ವವನ್ನು ಖಚಿತಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆ, ತಾಲೂಕು ಮತ್ತು ಗ್ರಾ.ಪಂ.ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಹಾಗೂ ಸ್ಥಳೀಯ ಸಂಸ್ಥೆಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಸ್ವ-ಸಹಾಯ ಸಂಘದ ಗುಂಪುಗಳು ಪಂಚಾಯತ್‌ರಾಜ್ ಸಂಸ್ಥೆಗಳು, ಶಾಲಾ ಮಕ್ಕಳು, ಸ್ವಯಂ ಸೇವಕರು ಮತ್ತು ಮುಂಚೂಣಿ ಕಾರ್ಯಕರ್ತೆಯರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ವೇಳೆ ಜಿ.ಪಂ. ಮುಂಭಾಗದ ಆವರಣ, ಉದ್ಯಾನವನ ಸೇರಿ ಹಲವೆಡೆ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಕಸ, ನೀರಿನ ಬಾಟಲಿ, ವಿವಿಧ ರೀತಿಯ ತ್ಯಾಜ್ಯ ಸಂಗ್ರಹಿಸುವ ಮೂಲಕ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಭಾಗಿಯಾದರು. ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಸಿಬ್ಬಂದಿ ಇದ್ದರು.