ಜಿಲ್ಲೆ

ಸ್ಮಾರ್ಟ್‌ಸಿಟಿಯ ಸ್ವಚ್ಛತೆಗೆ ಅಭಿಯಾನದ ಬಲ

ರಮೇಶ ಜಹಗೀರದಾರ್

ರಮೇಶ ಜಹಗೀರದಾರ್ ದಾವಣಗೆರೆ :  ಇದು ಹೇಳಿ ಕೇಳಿ ಮಳೆಗಾಲ. ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದರ ಜತೆಗೆ ಕಸವೂ ಸೇರಿಕೊಂಡರೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ.  ಇದನ್ನು ಮನಗಂಡು ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯು ಸ್ವಚ್ಛ ಭಾರತ್ ಮಿಷನ್- ಅರ್ಬನ್ ಯೋಜನೆ ಅಡಿಯಲ್ಲಿ ‘ಸಫಾಯಿ ಅಪ್ನಾವೋ ಬಿಮಾರಿ ಭಗಾವೋ’ (ಸಬ್) ಎಂಬ ಅಭಿಯಾನವನ್ನು ಜುಲೈ 1 ರಿಂದ 31ರ ವರೆಗೆ ಹಮ್ಮಿಕೊಂಡಿದೆ.  ಈ ಅಭಿಯಾನಕ್ಕೆ ಸ್ಮಾರ್ಟ್‌ಸಿಟಿಗಳಲ್ಲಿರುವ ವ್ಯವಸ್ಥೆಯನ್ನು ಬಳಸಿಕೊಂಡಿದೆ. ಇಂಟಿಗ್ರೇಟೆಡ್ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿರುವ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ.  ದಾವಣಗೆರೆಯಲ್ಲೂ ಈ ಅಭಿಯಾನ ಆರಂಭವಾಗಿದೆ. ಸ್ಮಾರ್ಟ್‌ಸಿಟಿಯ ಸಹಾಯವಾಣಿಯ (ಹೆಲ್ಪ್‌ಡೆಸ್ಕ್) ಮೂಲಕ ಮಹಾನಗರ ಪಾಲಿಕೆಯ ಜತೆಗೆ ಕೈಜೋಡಿಸಿ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಈ ಅಭಿಯಾನದ ಸಂಕಲ್ಪವಾಗಿದೆ.