ಜಿಲ್ಲೆ

ಹೋರಾಟ ಮಾಡಿದವರಿಗೆ ಫಲ ಖಚಿತ

ರಮೇಶ ಜಹಗೀರದಾರ್

ದಾವಣಗೆರೆ : ರಾಮ ಮಂದಿರ ವಿಷಯದಲ್ಲಿ ಹೋರಾಟ ಮಾಡಿದವರಿಗೆ ಫಲ ಸಿಗುವುದು ಖಚಿತ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
 ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ನಡೆದಿರುವ ಆಂದೋಲನದ ಭಾಗವಾಗಿ ಇಲ್ಲಿನ ವಿನೋಬ ನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
 ಆದರೆ ರಾಮ ಮಂದಿರ ನಿರ್ಮಾಣ ವಿರೋಧಿಸಿದ್ದ, ಶ್ರೀರಾಮಚಂದ್ರನ ಅಸ್ತಿತ್ವವನ್ನು ಪ್ರಶ್ನೆ ಮಾಡಿದ್ದ, ಶ್ರೀರಾಮ ಕೇವಲ ಕಾಲ್ಪನಿಕ ಎಂದು ಬೊಬ್ಬೆ ಹೊಡೆದಿದ್ದ ಕಾಂಗ್ರೆಸ್‌ಗೆ ಯಾವ ಫಲ ಸಿಗುತ್ತದೆ ಎಂಬುದನ್ನು ಕಾಲ ನಿರ್ಧರಿಸಲಿದೆ ಎಂದು ತಿಳಿಸಿದರು.
 ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಶ್ರೇಯಸ್ಸನ್ನು ಬಿಜೆಪಿಯವರು ಪಡೆಯುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಮಂದಿರ ನಿರ್ಮಾಣ ಮಾಡುವಲ್ಲಿ ಬಿಜೆಪಿಯ ಪಾತ್ರ ಏನಿತ್ತು, ಶ್ರಮ ಎಷ್ಟಿತ್ತು ಎಂಬುದು ದೇಶದ ಜನರಿಗೆ ಗೊತ್ತಿದೆ. ಕಾಂಗ್ರೆಸ್ ನಿಲುವು ಏನಾಗಿತ್ತು ಎಂಬುದೂ ಎಲ್ಲರಿಗೂ ತಿಳಿದಿದೆ ಎಂದರು.
 ಶತಮಾನಗಳ ಭಾರತೀಯರ ಕನಸು ಇದೀಗ ನನಸಾಗುತ್ತಿದೆ. ಹಿಂದುಗಳ ಶ್ರದ್ಧಾ ಕೇಂದ್ರ ಅಯೋಧ್ಯೆ ಪ್ರತಿಯೊಬ್ಬ ಭಾರತೀಯರ ಮನೆ, ಮನಗಳನ್ನು ಆವರಿಸಿದೆ. ಸೋಮವಾರದ ಕಾರ್ಯಕ್ರಮವನ್ನು ದೇಶ ವಿದೇಶಗಳಲ್ಲಿ ಹಬ್ಬದ ರೀತಿಯಲ್ಲಿ ಆಚರಿಸಲು ಸಿದ್ಧತೆ ನಡೆದಿದೆ. ಭಾರತೀಯರು ರಾಮಚಂದ್ರ ಪ್ರಭುವಿನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ತಮ್ಮ ಮನೆಯ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ಕಾತರದಿಂದ ಕಾಯುತ್ತಿದ್ದಾರೆ ಎಂದು ತಿಳಿಸಿದರು.
 ಜಿಲ್ಲೆಯಲ್ಲಿಯೂ ಪ್ರತಿಯೊಂದು ಗ್ರಾಮ, ನಗರಗಳಲ್ಲಿ ಆ ದಿನ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ದಾವಣಗೆರೆ ನಗರ ಸಹ ರಾಮೋತ್ಸವಕ್ಕೆ ತೆರೆದುಕೊಂಡಿದೆ. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಇದರ ಭಾಗವಾಗುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.
 ಹರಿಹರ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಪಾಲಿಕೆ ಪ್ರತಿಪಕ್ಷ ನಾಯಕ ಪ್ರಸನ್ನಕುಮಾರ್, ಸದಸ್ಯ ಶಿವಪ್ರಕಾಶ್, ಪಕ್ಷದ ಮುಖಂಡರಾದ ಯಶವಂತರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ದಾಸಕರಿಯಪ್ಪ, ಪುಷ್ಪಾ ವಾಲಿ, ಗೌರಮ್ಮ ಪಾಟೀಲ್, ಶಿವನಗೌಡ ಪಾಟೀಲ್ ಇದ್ದರು.