ದಾವಣಗೆರೆ : ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ‘ಅಮೃತಮತಿ’ ಚಲನಚಿತ್ರವು ಸಮುದಾಯದ ಸಿನಿಮಾ ಆಗಿದ್ದು, ಹೆಣ್ಣಿನ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಅದರಲ್ಲಿ ಪರಿಗಣಿಸಿದ್ದಾರೆ ಎಂದು ಜಾನಪದ ತಜ್ಞ ಮಲ್ಲಿಕಾರ್ಜುನ ಕಲಮರಹಳ್ಳಿ ಅಭಿಪ್ರಾಯಪಟ್ಟರು.
ಸಮುದಾಯದತ್ತ ಸಿನಿಮಾ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನ್ನ ಕವಿಯ ‘ಯಶೋಧರ ಚರಿತೆ’ ಆಧರಿತ ‘ಅಮೃತಮತಿ ಚಿತ್ರಯಾತ್ರೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೃಜನಾತ್ಮಕ ಕಥನ ಕಲೆಯನ್ನು ಹೊಂದಿರುವ ಬರಗೂರು ರಾಮಚಂದ್ರಪ್ಪ, ಸೈದ್ಧಾಂತಿಕ ಧೋರಣೆ ಪ್ರತಿಬಿಂಬಿಸುವ ಕಲಾತ್ಮಕ ಚಿತ್ರಗಳಿಂದ ಖ್ಯಾತಿ ಪಡೆದವರು. ಅಮೃತಮತಿ ಚಿತ್ರವೂ ಈ ದಿಕ್ಕಿನಲ್ಲಿ ಸಾಗಿದೆ. ಪ್ರಜಾಪ್ರಭುತ್ವದ ಕಟ್ಟುಪಾಡುಗಳು ನಿಸರ್ಗದತ್ತ ಸುಖವನ್ನು ಹೇಗೆ ನಿರ್ಬಂಧಿಸುತ್ತವೆ ಎನ್ನುವ ಪರಿಕಲ್ಪನೆಯನ್ನು ಚಲನಚಿತ್ರದಲ್ಲಿ ಬಿಂಬಿಸಿದ್ದಾರೆ ಎಂದು ಹೇಳಿದರು.
ನಿರ್ಬಂಧದ ವ್ಯತಿರಿಕ್ತ ಹಾಗೂ ಅತಿರಿಕ್ತ ಪರಿಣಾಮಗಳನ್ನೇ ಅಮೃತಮತಿಯ ಮೂರ್ತರೂಪವಾಗಿ ಪ್ರತಿಬಿಂಬಿಸಿಕೊಂಡು ಬರಗೂರು ಅವರು ರೂಪಿಸಿದ್ದಾರೆ. ಭೋಗ ವರ್ಸಸ್ ಸುಖ, ಅರಮನೆ ನೆಲಮನೆ, ಶಿಷ್ಟ ಜಾನಪದ ಈ ಪರಿಕಲ್ಪನೆಯೊಳಗೆ ಚಿತ್ರವು ಸಾಗುತ್ತದೆ ಎಂದು ವಿಶ್ಲೇಷಿಸಿದರು.
ವೈಭೋಗವಿರುವ ಕಡೆ ಸುಖ ಇರುವುದಿಲ್ಲ. ಸುಖಕ್ಕೆ ವೈಭೋಗದ ಅಗತ್ಯವಿಲ್ಲ ಎನ್ನುವ ತಾತ್ವಿಕ ಜಿಜ್ಞಾಸೆಯಲ್ಲಿ ಈ ಚಿತ್ರ ರೂಪಿಸಿದ್ದಾರೆ. ನಿಸರ್ಗದತ್ತ ಸುಖಕ್ಕೆ ಭೋಗದ ಪರಿಕಲ್ಪನೆ ಬೇಕಾಗಿಲ್ಲ. ಅರಮನೆಯಂತೂ ಅವಶ್ಯತೆ ಇಲ್ಲ ಎಂಬ ತಾತ್ವಿಕ ರೂಪವನ್ನು ನೀಡಿದ್ದಾರೆ. ಈ ಚಿತ್ರವನ್ನು ಸಮುದಾಯಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಮೃತಮತಿ ಚಿತ್ರಯಾತ್ರೆಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿ, ಜನರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದಲ್ಲ, ಜನರ ಬಳಿಗೇ ಸಿನಿಮಾವನ್ನು ಕೊಂಡೊಯ್ಯಬೇಕು ಎಂಬುದು ಬರಗೂರು ಅವರ ಹೊಸ ಕಲ್ಪನೆ. ಸಮಕಾಲೀನ ಸಂದರ್ಭದ ಸಂಕಟ, ತಲ್ಲಣಗಳಿಗೆ ನಮ್ಮ ಇತಿಹಾಸ, ಸಾಹಿತ್ಯ ಚರಿತ್ರೆಯಲ್ಲಿಯೇ ಉತ್ತರವಿದೆ. ಅವುಗಳನ್ನು ಸಮಕಾಲೀನಗೊಳಿಸಿಕೊಂಡು ನೋಡಬೇಕಾದ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು.
ಪ್ರಾಚಾರ್ಯೆ ಎಸ್.ಎ. ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಮಂಜಣ್ಣ, ಪ್ರಾಧ್ಯಾಪಕ ತೊಪ್ಪಲ ಕೆ.ಮಲ್ಲಿಕಾರ್ಜುನಗೌಡ, ಐಕ್ಯುಎಸಿ ಸಂಚಾಲಕ ಡಾ.ಎಂ.ಪಿ. ಭೀಮಪ್ಪ, ಡಾ.ಓಬಳೇಶ್ ನಿರೂಪಿಸಿದರು.
ಕಾರ್ಯಕ್ರಮದ ನಂತರ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.