ದಾವಣಗೆರೆ : ದ್ವಾರಕೀಶ್ ಒಳ್ಳೆಯ ಕನಸುಗಾರ. ಹೊಸ ಕನಸುಗಳನ್ನು ಕಂಡು ಸಾಕಾರಗೊಳಿಸಿ ಕನ್ನಡ ಚಿತ್ರರಂಗದಲ್ಲಿ ಅಪರೂಪದ ಸಾಧನೆ ಮಾಡಿದವರು ಎಂದು ಸಿನಿಮಾ ನಿರ್ದೇಶಕ, ನಿರ್ಮಾಪಕ ಎಚ್.ಆರ್. ಭಾರ್ಗವ ಹೇಳಿದರು.
ಸಿನಿಮಾ ಸಿರಿ ಸಂಸ್ಥೆಯ ವತಿಯಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ, ದ್ವಾರಕೀಶ್ ನುಡಿನಮನ ಹಾಗೂ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಅವರನ್ನು ಕನಸುಗಾರ ಎಂದು ಹೇಳಲಾಗುತ್ತದೆ. ದ್ವಾರಕೀಶ್ ಅವರಿಗೂ ಈ ಮಾತು ಹೆಚ್ಚು ಅನ್ವಯಿಸುತ್ತದೆ ಎಂದು ಹಲವು ಉದಾಹರಣೆಗಳನ್ನು ನೀಡಿದರು.
‘ಸಿಂಗಾಪುರದಲ್ಲಿ ರಾಜಾ ಕುಳ್ಳ’ ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಿದ್ದು ಆಗಿನ ಕಾಲದಲ್ಲಿ ದೊಡ್ಡ ಸಾಧನೆಯಾಗಿತ್ತು. ‘ಆಫ್ರಿಕಾದಲ್ಲಿ ಶೀಲಾ’ ಚಿತ್ರವನ್ನು 3 ಭಾಷೆಗಳಲ್ಲಿ ನಿರ್ಮಾಣ ಮಾಡಿದರು. ಅದರ ಚಿತ್ರೀಕರಣದ ವೇಳೆ ಕುದುರೆ ಕಳೆದುಹೋದ ಘಟನೆಯನ್ನು ಪ್ರಸ್ತಾಪಿಸಿ, ದ್ವಾರಕೀಶ್ ಅವರು ಧೃತಿಗೆಡದೆ ಮುನ್ನುಗ್ಗುತ್ತಿದ್ದ ಪರಿಯನ್ನು ವಿವರಿಸಿದರು.
ಲಂಡನ್‌ನಲ್ಲಿ ಹಾಡೊಂದರ ಧ್ವನಿಮುದ್ರಣ ಮಾಡಿದರು. ಕಿಶೋರ್ ಕುಮಾರ್, ಕುಮಾರ್ ಸಾನು ಅವರಂಥ ಕಲಾವಿದರಿಂದ ಕನ್ನಡ ಗೀತೆಗಳನ್ನು ಹಾಡಿಸಿದರು. ಚಿತ್ರಕ್ಕೆ ಒಳ್ಳೆಯ ಹಾಡುಗಳನ್ನು ಆಯ್ಕೆ ಮಾಡುತ್ತಿದ್ದರು ಎಂದು ಅವರಿಗಿದ್ದ ಸಂಗೀತದ ಅಭಿರುಚಿಯ ಬಗ್ಗೆ ಹೇಳಿದರು.
ದ್ವಾರಕೀಶ್ ಅವರು ಚಿತ್ರರಂಗದ ಬದುಕಿನಲ್ಲಿ ಹಲವು ಏಳು ಬೀಳುಗಳನ್ನು ಕಂಡರು. ಅನೇಕ ಚಿತ್ರಗಳು ಯಶಸ್ವಿಯಾದವು. ಒಂದು ಕಾಲದಲ್ಲಿ ಅವರು ನಿರ್ಮಿಸಿದ 17-18 ಸಿನಿಮಾಗಳು ನಷ್ಟ ಅನುಭವಿಸಿದವು. ಆದರೂ ಅವರು ಧೃತಿಗೆಡಲಿಲ್ಲ. ಹೇಗಾದರೂ ಮಾಡಿ ಆ ಪರಿಸ್ಥಿತಿಯನ್ನು ಎದುರಿಸಿದರು. ‘ಆಪ್ತಮಿತ್ರ’ ಚಿತ್ರದ ಮೂಲಕ ಮತ್ತೆ ಯಶಸ್ಸನ್ನು ಕಂಡರು. ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅವರದು ಯಶಸ್ವಿ ಜೋಡಿಯಾಗಿತ್ತು ಎಂದು ಅವರ ಸಿನಿ ಜೀವನದ ಪ್ರಯಾಣವನ್ನು ಮೆಲುಕು ಹಾಕಿದರು.
ಚಿತ್ರ ನಿರ್ಮಾಣ, ನಿರ್ದೇಶನದ ಜತೆಗೆ ದ್ವಾರಕೀಶ್ ನಟನೆಯಲ್ಲೂ ಹೆಸರು ಮಾಡಿದರು. ಹಾಸ್ಯ ನಟನಾಗಿ ಪ್ರೇಕ್ಷಕರನ್ನು ರಂಜಿಸಿದರು. ಚಿತ್ರರಂಗದಲ್ಲಿ ಅವರು ಮಾಡದಿರುವ ಕೆಲಸವೇ ಇಲ್ಲ. ಅವರು ಸುಮ್ಮನೆ ಕೂರುವ ಜಾಯಮಾನದವರಾಗಿರಲಿಲ್ಲ. ಒಂದಿಲ್ಲ ಒಂದು ಪ್ರಯೋಗಗಳನ್ನು ಮಾಡುತ್ತಲೇ ಕನ್ನಡ ಚಿತ್ರರಂಗವನ್ನು ಬೆಳಗಿದರು ಎಂದು ತಿಳಿಸಿದರು.
ದ್ವಾರಕೀಶ್ ಹಾಗೂ ತಮ್ಮ ನಡುವಿನ ಒಡನಾಟವನ್ನು ಮೆಲುಕು ಹಾಕಿ, ನನ್ನೊಳಗೊಬ್ಬ ನಿರ್ದೇಶಕನಿದ್ದಾನೆ ಎಂದು ಗುರುತಿಸಿ, ‘ಭಾಗ್ಯವಂತರು’ ಚಿತ್ರವನ್ನು ನಿರ್ದೇಶಿಸುವ ಅವಕಾಶವನ್ನು ನೀಡಿದರು ಎಂದರು.
ದ್ವಾರಕೀಶ್ ಅವರ ಸಾಧನೆಗಳನ್ನು ಗುರುತಿಸಿ ದಾವಣಗೆರೆಯ ಸಿನಿಮಾ ಸಿರಿ ಸಂಸ್ಥೆ ಅವರ ನೆನಪಿಲ್ಲಿ ಈ ಕಾರ್ಯಕ್ರಮ ರೂಪಿಸಿದ್ದಾರೆ. ಆದರೆ ಬೆಂಗಳೂರಿನಲ್ಲೇ ಇಂಥದೊಂದು ಕಾರ್ಯಕ್ರಮ ಯಾರೂ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭಾರ್ಗವ ಅವರು ‘ಕನ್ನಿಕಾ ಪರಮೇಶ್ವರಿ’ ಎಂಬ ಸಾಕ್ಷೃಚಿತ್ರ ತೆಗೆಯಲು 1964-65 ರಲ್ಲಿ ದಾವಣಗೆರೆಗೆ ಬಂದಿದ್ದನ್ನು ನೆನಪಿಸಿಕೊಂಡರು. ಅದಾದ ನಂತರವೂ ಹಲವು ಬಾರಿ ಭೇಟಿ ನೀಡಿದ್ದಾಗಿ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಅಂದನೂರು ಮುಪ್ಪಣ್ಣ ಮಾತನಾಡಿದರು. ಭಾರ್ಗವ ಅವರ ಪತ್ನಿ ಪರಿಮಳಾ, ಬಿ.ಎಸ್. ನಾಗಪ್ರಕಾಶ್, ಟಿ.ಎಂ. ಪಂಚಾಕ್ಷರಯ್ಯ, ಆರ್.ಟಿ. ಮೃತ್ಯುಂಜಯ, ಬಂಡಿವಾಡ, ಎಚ್.ಬಿ. ಮಂಜುನಾಥ ಸ್ವಾಮಿ ಇದ್ದರು. ಸುರಭಿ ಶಿವಮೂರ್ತಿ ಸ್ವಾಗತಿಸಿದರು. ಸಾಲಿಗ್ರಾಮ ಗಣೇಶ ಶೆಣೈ ನಿರೂಪಿಸಿದರು. ಸಂಗೀತಾ ರಾಘವೇಂದ್ರ ಪ್ರಾರ್ಥಿಸಿದರು.