ಜಿಲ್ಲೆ

ಸಂವಿಧಾನ ದೇಶದ ದೊಡ್ಡ ಬಲ

ರಮೇಶ ಜಹಗೀರದಾರ್

ಚನ್ನಗಿರಿ :  ಭಾರತಕ್ಕೆ ಸಂವಿಧಾನವೇ ದೊಡ್ಡ ಬಲವಾಗಿದೆ. ಅದು ದೇಶದ ಜನರನ್ನು ಸಶಕ್ತರನ್ನಾಗಿ ಮಾಡಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜಿ. ಮಹಾಲಕ್ಷ್ಮೀ ಹೇಳಿದರು.  ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಅಶ್ರಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಂಗಳವಾರ ಮಾತನಾಡಿದರು.  ಸಂವಿಧಾನವು ಸರ್ವರಿಗೂ ಸಮಾನತೆ, ಮೂಲಭೂತ ಹಕ್ಕು, ಕರ್ತವ್ಯಗಳನ್ನು ನೀಡಿದೆ. ಅದು ನಮ್ಮೆಲ್ಲರನ್ನು ರಕ್ಷಿಸುವ ಬಹು ದೊಡ್ಡ ಕಾನೂನು. ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳು ಇರುವಲ್ಲಿ ಆಚರಣೆ ಮಾಡವುದರ ಮೂಲಕ ಇದರ ಪ್ರಾಮುಖ್ಯತೆ ತಿಳಿಸಬೇಕಿದೆ ಎಂದರು.  ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ನೀಡಬೇಕಿದೆ. ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವತಂತ್ರ ಸ್ಥಾನಮಾನ ಹಾಗೂ ಅವಕಾಶಗಳ ಸಮಾನತೆಯನ್ನು ದೊರಕಿಸಿ ವೈಯಕ್ತಿಕ ಘನತೆ, ದೇಶದ ಒಗ್ಗಟ್ಟು ಪ್ರೋತ್ಸಾಹಿಸುವುದು ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.  ವಕೀಲರ ಸಂಘದ ಅಧ್ಯಕ್ಷ ಎಂ.ರಾಜಪ್ಪ, ಕಾರ್ಯದರ್ಶಿ ಎಂ.ಎಸ್.ಜಗದೀಶ್, ಖಜಾಂಚಿ ವಿ.ಎ.ಮಲ್ಲಿಕಾರ್ಜುನ, ಬಸವರಾಜ ಪೂಜಾರ್, ಕಾಲೇಜಿನ ಪ್ರಾಚಾರ್ಯ ಬಸವರಾಜಪ್ಪ, ಉಪನ್ಯಾಸಕ ನವೀನ್ ಕುಮಾರ್ ಇದ್ದರು.