ಜಿಲ್ಲೆ

ಬಲಗೈ ಸಮುದಾಯಕ್ಕೆ ಅನ್ಯಾಯ ಆರೋಪ

ರಮೇಶ ಜಹಗೀರದಾರ್

ದಾವಣಗೆರೆ : ಒಳಮೀಸಲಾತಿ ಕಲ್ಪಿಸಲು ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗ ಸಮೀಕ್ಷೆ ನಡೆಸಿ ಸಲ್ಲಿಸಿರುವ ವರದಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.  ಈ ವೇಳೆ ಮಹಾಸಭಾದ ಜಿಲ್ಲಾಧ್ಯಕ್ಷ ಎನ್. ರುದ್ರಮುನಿ ಮಾತನಾಡಿ, ನಾಗಮೋಹನ್ ದಾಸ್ ಆಯೋಗವು ಬಲಗೈ ಸಮುದಾಯದಲ್ಲಿನ ಮೂಲ ಉಪ ಜಾತಿಗಳನ್ನು ಒಂದು ಗುಂಪಿನಡಿ ಗುರುತಿಸಿಲ್ಲ. ವರದಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಪಂಗಡದ ವ್ಯಾಪ್ತಿಗೆ ಸೇರಿಸಲಾಗಿದೆ. ಅಲ್ಲದೇ, ಬಲಗೈ ಸಮುದಾಯದ ಇನ್ನೂ ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಜನಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿದರು.  ಛಲವಾದಿ ಸಮುದಾಯವನ್ನು ಐದು ಪಂಗಡಗಳನ್ನಾಗಿ ವಿಂಗಡಿಸಿ ಕಡಿಮೆ ಜನಸಂಖ್ಯೆ ತೋರಿಸಲಾಗಿದೆ. ಅವುಗಳನ್ನು ಒಗ್ಗೂಡಿಸಿ ಮೀಸಲಾತಿ ನೀಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.  ಮಹಾಸಭಾದ ಗೌರವಾಧ್ಯಕ್ಷ ಶೇಖರಪ್ಪ, ಮುಖಂಡರಾದ ಎಚ್.ಕೆ. ಬಸವರಾಜ, ಜಯಪ್ರಕಾಶ್, ತಣಿಗೆರೆ ಅಣ್ಣಪ್ಪ, ನಾಗರಾಜ ಚನ್ನಗಿರಿ, ಧರಣೇಂದ್ರ, ಲೋಕೇಶ್, ತಿಮ್ಮಣ್ಣ, ಜಗಳೂರಿನ ನಿಜಲಿಂಗಪ್ಪ, ತಿಪ್ಪೇಸ್ವಾಮಿ, ಡಾ. ಜಗನಾಥ, ಕೊಟ್ರಬಸಪ್ಪ, ರವಿ ಆರ್. ದೊಡ್ಡಮನೆ, ಸಾರಥಿ ಬಸವರಾಜು, ನವೀನ್ ಕುಮಾರ್, ಎಲ್.ಟಿ. ಮಧುಸೂದನ್, ಎನ್.ಡಿ. ಹಾಲೇಶಪ್ಪ, ರುದ್ರಮ್ಮ ಮಲ್ಲಿಕಾರ್ಜುನ್, ಸಿ.ಎಂ. ಓಂಕಾರಪ್ಪ, ಗಂಗಾಧರ, ಪ್ರಶಾಂತ್ ಭಾಗವಹಿಸಿದ್ದರು.