ದಾವಣಗೆರೆ : ಬೆಂಗಳೂರು ಆರ್.ಆರ್.ನಗರದ ಶಾಸಕ ಮುನಿರತ್ನ ಅವರು ಛಲವಾದಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಗಡಿಪಾರು ಮಾಡಬೇಕು ಎಂದು ಛಲವಾದಿ ಮಹಾಸಭಾ ದಾವಣಗೆರೆ ಘಟಕದ ಅಧ್ಯಕ್ಷ ಎನ್. ರುದ್ರಮುನಿ ಒತ್ತಾಯಿಸಿದರು. ಮುನಿರತ್ನ ಅವರು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನಿಗೆ ಅವಾಚ್ಯವಾಗಿ ಬೈಯುವ ಮೂಲಕ ಜಾತಿನಿಂದನೆ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಖಂಡನೀಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚುನಾವಣೆಯಲ್ಲಿ ಆಯ್ಕೆಯಾಗಿ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಶಾಸಕರು ಈ ರೀತಿ ಮಾತನಾಡುವುದು ಸಂವಿಧಾನ ಹಾಗೂ ಎಲ್ಲ ಜನ ಸಮುದಾಯಕ್ಕೆ ಮಾಡುವ ಅವಮಾನ. ಸರ್ಕಾರ ಈಗಾಗಲೇ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿರುವುದು ಸ್ವಾಗತಾರ್ಹ ಎಂದರು. ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಗಡಿಪಾರು ಮಾಡಲು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಟಿ.ಎಸ್.ರಾಮಯ್ಯ, ಶೇಖರಪ್ಪ, ನಾಗಭೂಷಣ್, ಹದಡಿ ಚಂದ್ರಪ್ಪ, ನವೀನ್‌ಕುಮಾರ್ ಇದ್ದರು.