ಜಿಲ್ಲೆ

ಸಿಇಟಿ ಪರೀಕ್ಷೆಗೆ ಜಿಲ್ಲೆಯಲ್ಲಿ 28 ಕೇಂದ್ರ

ರಮೇಶ ಜಹಗೀರದಾರ್

ದಾವಣಗೆರೆ : ಸಿಇಟಿ-2025 ರ ಪರೀಕ್ಷೆಯು ಏ. 16 ಮತ್ತು 17 ರಂದು ನಡೆಯಲಿದ್ದು ಜಿಲ್ಲೆಯ 28 ಕೇಂದ್ರಗಳಲ್ಲಿ 12,875 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಹೇಳಿದರು.  ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸಿಇಟಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಎಲ್ಲ ಕೇಂದ್ರಗಳ ಪ್ರಾಚಾರ್ಯರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ತಿಳಿಸಿದರು.  ಏ. 16 ರಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. 17 ರಂದು ಬೆಳಗ್ಗೆ 10.30 ರಿಂದ 11.50 ರ ವರೆಗೆ ಗಣಿತಶಾಸ್ತ್ರ ಹಾಗೂ ಮಧ್ಯಾಹ್ನ 2.30 ರಿಂದ 3.50 ರವರೆಗೆ ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ. ಎಲ್ಲ ವಿಷಯಗಳು 60 ಅಂಕಗಳಿಗೆ ಸೀಮಿತವಾಗಿರುತ್ತವೆ ಎಂದರು.  ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕು, ಗಾಳಿ, ಬೆಳಕು ಸರಿಯಾಗಿರಬೇಕು. ಕೆಲವು ಕಾಲೇಜುಗಳಲ್ಲಿ ಶೌಚಗೃಹದ ಬಳಿ ಇರುವ ಕೊಠಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಹೇಳಿದರು.  ಸಿಇಟಿ ಬರೆಯುವ ಅಭ್ಯರ್ಥಿಗಳು ವಸ್ತ್ರಸಂಹಿತೆ ಪರಿಪಾಲನೆ ಮಾಡಬೇಕು. ಪುರುಷ ಅಭ್ಯರ್ಥಿಗಳಿಗೆ ಪರೀಕ್ಷಾ ದಿನದಂದು ಪೂರ್ಣ ತೋಳಿನ ಶರ್ಟ್‌ಗಳನ್ನು ಅನುಮತಿಸಲಾಗುವುದಿಲ್ಲ. ಅರ್ಧ ತೋಳಿನ ಶರ್ಟ್ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಸಾಧಾರಣ ಅಂಗಿ, ಟಿ ಶರ್ಟ್ ಧರಿಸಬೇಕು. ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ. ಕಿವಿಯೋಲೆ, ಉಂಗುರು, ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.  ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್ ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷಿದ್ಧ. ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಮುಜುಗರವಾಗದಂತೆ ಮತ್ತು ವಸ್ತ್ರ ಸಂಹಿತೆಯಂತೆ ಧರಿಸಬೇಕು. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ.  ಎಲೆಕ್ಟ್ರಾನಿಕ್ಸೃ್ ವಸ್ತುಗಳು, ಮೊಬೈಲ್, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂಥ್, ಕೈ ಗಡಿಯಾರಗಳನ್ನು ಕೊಠಡಿಗೆ ತರುವಂತಿಲ್ಲ. ಪ್ರವೇಶ ಪತ್ರ, ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.  ಅಭ್ಯರ್ಥಿಗಳು ಕೇಂದ್ರದೊಳಗೆ ಕನಿಷ್ಠ ಮೊದಲ ಬೆಲ್ ಆಗುವ 2 ಗಂಟೆ ಮುಂಚಿತವಾಗಿ ಹಾಜರಿರಬೇಕು. ಕೇಂದ್ರದಲ್ಲಿ ಕೊಠಡಿ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳ ಮುಖವನ್ನಾಧರಿಸಿ ಆ್ಯಪ್ ಮೂಲಕ ಗುರುತು ಪತ್ತೆ ಮಾಡುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.  ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕರಿಸಿದ್ದಪ್ಪ ಹಾಗೂ ಕಾಲೇಜಿನ ಪ್ರಾಚಾರ್ಯರು, ಅಧಿಕಾರಿಗಳು ಇದ್ದರು.