ಜಿಲ್ಲೆ

ಜಾತಿ ಕಾಲಂನಲ್ಲಿ ಭೋವಿ/ವಡ್ಡರ್ ಎಂದೇ ಬರೆಸಿ

ದಾವಣಗೆರೆ :  ಒಳ ಮೀಸಲಾತಿ ಜಾರಿ ಸಂಬಂಧ ಗಣತಿದಾರರು 1ನೇ ಹಂತದಲ್ಲಿ ಮೇ 5 ರಿಂದ 17ರ ವರೆಗೆ ಮನೆ ಮನೆಗೆ ಬರಲಿದ್ದು, ಭೋವಿ ಸಮಾಜದವರು ಜಾತಿ ಕಾಲಂನಲ್ಲಿ ಭೋವಿ ಎಂದು ಬರೆಸುವಂತೆ ಸಮಾಜದ ಮುಖಂಡ ಡಿ. ಬಸವರಾಜ್ ಮನವಿ ಮಾಡಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದವರು ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು. ಇದರಿಂದ ಮಕ್ಕಳ ಶಿಕ್ಷಣ, ಉದ್ಯೋಗ ಅವಕಾಶಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.  ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದರಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ನೇಮಿಸಿದೆ ಎಂದು ಹೇಳಿದರು.  ಈ ಹಿನ್ನೆಲೆಯಲ್ಲಿ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಸಮೀಕ್ಷೆ ಕೈಗೊಳ್ಳುವ ಉದ್ದೇಶದಿಂದ ಮೂರು ಹಂತದಲ್ಲಿ ಸಮಗ್ರ ಅಂಕಿ ಅಂಶಗಳನ್ನು ಸಂಗ್ರಹಣೆ ಮಾಡಲಿದೆ. ಮೊದಲ ಎರಡು ಹಂತಗಳ ಸಮೀಕ್ಷೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗದೇ ಇದ್ದವರು ಮೂರನೇ ಹಂತದಲ್ಲಿ ಭಾಗವಹಿಸಬಹುದು. ಅಂತಹವರು ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಂಡು ಮಾಹಿತಿಯನ್ನು ಒದಗಿಸಬಹುದು ಎಂದರು.  ಇದಕ್ಕಾಗಿ ಪರಿಶಿಷ್ಟ ಜಾತಿಯ ಜನರು ಆಧಾರ್ ಸಂಖ್ಯೆ ಮತ್ತು ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಆನ್‌ಲೈನ್ ಸಮೀಕ್ಷೆ ಮೇ 22 ರಿಂದ 27 ರ ವರೆಗೆ ನಡೆಯಲಿದೆ. 19 ರಿಂದ  21ರ ವರೆಗೆ ಎರಡನೇ ಹಂತದಲ್ಲಿ ಮನೆ ಭೇಟಿಯ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಪಡೆಯಲಾಗುತ್ತದೆ. ನಾವು ವಾಸಿಸುವ ಮತ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗುವ ಸಮೀಕ್ಷಾ ಕೇಂದ್ರಕ್ಕೆ ಆಧಾರ್ ಮತ್ತು ಪಡಿತರ ಚೀಟಿಯೊಂದಿಗೆ ತೆರಳಿ ಭೋವಿ ಎಂದು ಬರೆಸಬೇಕು ಎಂದು ಹೇಳಿದರು.  ಮೈಸೂರು ಮಹಾರಾಜ ನಾಲ್ವಡಿ ಕೃಷ್ಣಾರಾಜ ಒಡೆಯರ್ ಅವರು 1934ರಲ್ಲೇ ಭೋವಿ ಸಮುದಾಯಕ್ಕೆ ಮೀಸಲಾತಿಯನ್ನು ಮೈಸೂರು, ಬೆಂಗಳೂರು ಸೇರಿದಂತೆ 16 ಜಿಲ್ಲೆಗಳಲ್ಲಿ ನೀಡಿದ್ದರು. 1976ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಕೇಂದ್ರ ಸಮಾಜ ಕಲ್ಯಾಣ ಸಚಿವ ಬಾಬು ಜಗಜೀವನ್ ರಾಮ್ ಅವರು, ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಶಿಫಾರಸಿನಂತೆ ಅಖಂಡ ಕರ್ನಾಟಕಕ್ಕೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಭೋವಿ ಸಮುದಾಯವನ್ನು ಸೇರ್ಪಡೆ ಮಾಡಿದರು ಎಂದು ಮಾಹಿತಿ ನೀಡಿದರು.  ಮಂಜುನಾಥ್, ಗಣೇಶ್, ಸೋಮಶೇಖರ್, ಶಿವಕುಮಾರ್, ಗಿರಿಧರ ಸುದ್ದಿಗೋಷ್ಠಿಯಲ್ಲಿದ್ದರು.