ದಾವಣಗೆರೆ : ತಾಲೂಕಿನ ಕುಕ್ಕವಾಡ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ, ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಮನೆಗೆ ನುಗ್ಗಿದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಸುನಂದಮ್ಮ ಗಾಯಗೊಂಡ ಮಹಿಳೆ. ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ತ್ಯಾವಣಿಗೆ ಕಡೆಯಿಂದ ಅತಿ ವೇಗವಾಗಿ ಬಂದ ಕಾರು ಕುಕ್ಕವಾಡ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿತು. ವೃತ್ತದಲ್ಲಿದ್ದ ಸಿಮೆಂಟ್ ಆಸನ, ಪಿಲ್ಲರ್‌ಗೆ ಡಿಕ್ಕಿ ಹೊಡೆದು ಸಮೀಪದಲ್ಲಿದ್ದ ಮನೆಗೆ ನುಗ್ಗಿತು. ಕಾಂಪೌಂಡ್ ಸೀಳಿ ಮನೆಯ ಗೋಡೆ ಒಡೆದಿದೆ. ಗೋಡೆಗೆ ಹೊಂದಿಕೊಂಡ ಕೊಠಡಿಯಲ್ಲಿ ಮಲಗಿದ್ದ ಮಹಿಳೆಯ ಮೇಲೆ ಇಟ್ಟಿಗೆಗಳು ಬಿದ್ದಿವೆ. ಹದಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.