ದಾವಣಗೆರೆ : ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ನಗರದ ‘ಡಾ. ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣ’ವು ಸೋಮವಾರ ಲೋಕಾರ್ಪಣೆಗೊಂಡಿದ್ದು ಬಸ್‌ಗಳು ಕಾರ್ಯಾರಂಭ ಮಾಡಿದವು. ಸ್ಮಾರ್ಟ್‌ಸಿಟಿ ಯೋಜನೆಯಡಿ ಹೊಸ ನಿಲ್ದಾಣ ನಿರ್ಮಿಸುವ 20 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು 2019 ರ ಮಾ. 1 ರಂದು ಆರಂಭಿಸಲಾಯಿತು. 2023 ರ ಡಿಸೆಂಬರ್‌ನಲ್ಲಿ ಪೂರ್ಣಗೊಂಡಿತ್ತು. ಆದರೆ ವಿವಿಧ ಕಾರಣಗಳಿಂದ ಚಾಲನೆ ವಿಳಂಬವಾಗಿತ್ತು. ಬಸ್ ನಿಲ್ದಾಣ ಉದ್ಘಾಟಿಸಿದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಬಿಜೆಪಿ ಆಡಳಿತದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಸಚಿವರು ಬೆಂಗಳೂರಿನಿಂದ ಬಂದು ಲಾಭ ಮಾಡಿಕೊಂಡು ಹೋಗುತ್ತಿದ್ದರು. ಅವರಿಗೆ ಸ್ಥಳೀಯರು ಸಹಕಾರ ನೀಡಿದರು. ಈ ನಿಲ್ದಾಣದ ಅಂದವನ್ನು ಕೆಡಿಸಿದರು ಎಂದು ಆರೋಪಿಸಿದರು. ಆಧುನಿಕ ಬಸ್ ನಿಲ್ದಾಣದಲ್ಲಿ ಎಲ್ಲ ಸೌಕರ್ಯಗಳಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಎಲ್ಲರಿಗೂ ಇದರಿಂದ ಅನುಕೂಲವಾಗಬೇಕು. ನಿಲ್ದಾಣದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರದ ‘ಶಕ್ತಿ’ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ತೊಂದರೆ ಆಗಿರಬಹುದು, ಅದು ಸರ್ಕಾರದ ನಿಲುವಾಗಿದ್ದರಿಂದ ಏನೂ ಮಾಡಲು ಬರುವುದಿಲ್ಲ. ಬೇಕಿದ್ದರೆ ತೆರಿಗೆ ಕಡಿಮೆ ಮಾಡಲು ಸಾಧ್ಯತೆಯಿದೆ ಎಂದರು. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಜನರಿಗೆ ಹೆಚ್ಚು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಗರದ ರಿಂಗ್ ರಸ್ತೆ ಆರಂಭವಾಗಿದೆ. ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿದೇಶಗಳಲ್ಲಿನ ಮಾದರಿ ನೋಡಿ ಬಂದು ಬೇರೆ ವಿನ್ಯಾಸ ಮಾಡಲು ಯೋಜಿಸಿದ್ದರು. ಆದರೆ ಸರ್ಕಾರ ಬದಲಾಯಿತು. ಬಿಜೆಪಿಯವರು ವಿನ್ಯಾಸ ಬದಲಾಯಿಸಿದರು. ಹೆಚ್ಚು ಬಸ್‌ಗಳು ನಿಲುಗಡೆಯಾಗದಂತೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಹೆಚ್ಚು ಬಸ್‌ಗಳು ನಿಲ್ಲುವಂತಾಗಲು ಹೊಸ ಯೋಜನೆ ರೂಪಿಸಲಾಗುವುದು ಎಂದರು. ಪಾಲಿಕೆಯ ಮೇಯರ್ ಕೆ. ಚಮನ್‌ಸಾಬ್ ಮಾತನಾಡಿ, ಬಸ್ ನಿಲ್ದಾಣದ ರೂಪುರೇಶೆ ಸಿದ್ಧಪಡಿಸಿದವರು ಎಸ್.ಎಸ್. ಮಲ್ಲಿಕಾರ್ಜುನ್. ಸ್ಮಾರ್ಟ್‌ಸಿಟಿಯ ಪರಿಕಲ್ಪನೆಯನ್ನೂ ಅವರು ಮತ್ತು ಡಾ. ಶಾಮನೂರು ಶಿವಶಂಕರಪ್ಪ ಅವರು ರೂಪಿಸಿದರು. ಆದರೆ ಬಿಜೆಪಿಯವರು ನಿಲ್ದಾಣದಲ್ಲಿ ಬಸ್ ನಿಲ್ಲಲು ಅವ್ಯವಸ್ಥೆ ಮಾಡಿಟ್ಟಿದ್ದಾರೆ, ಅದನ್ನು ಸರಿಪಡಿಸಬೇಕಿದೆ ಎಂದು ಹೇಳಿದರು. ಉಪ ಮೇಯರ್ ಸೋಗಿ ಶಾಂತ ಕುಮಾರ್, ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ್, ಆಯುಕ್ತೆ ರೇಣುಕಾ, ಆರ್‌ಟಿಒ ಪ್ರಮುತೇಶ್, ಸ್ಮಾರ್ಟ್‌ಸಿಟಿ ಜನರಲ್ ಮ್ಯಾನೇಜರ್ ಕೃಷ್ಣಪ್ರಸಾದ್, ಖಾಸಗಿ ಬಸ್ ಮಾಲೀಕರ ಸಂಘದ ಕೆ.ಎಸ್. ಮಲ್ಲೇಶಪ್ಪ, ಏಜೆಂಟರ ಸಂಘದ ಉಮೇಶರಾವ್ ಸಾಳಂಕಿ, ಕಮ್ಮತ್ತಹಳ್ಳಿ ಎಸ್. ಮಂಜುನಾಥ್, ವೀರೇಂದ್ರ ಪಾಟೀಲ್, ಜಿ.ಸಿ. ಶಿವಮೂರ್ತಿ, ಎಚ್.ಸಿ. ಮಹೇಶ್ ಇದ್ದರು. ... (ಬಾಕ್ಸ್) ಬಿಜೆಪಿಯಲ್ಲಿ ಕಿತ್ತಾಟ, ಕಾಂಗ್ರೆಸ್‌ನಲ್ಲಿ ಶಿಸ್ತು ಹಿರಿಯರಾದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಬಗ್ಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಿರಿಯರಿಗೆ ಗೌರವ ನೀಡದೇ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು. ಬಿಜೆಪಿಯಲ್ಲಿ ನಾಯಕರ ನಡುವೇ ಕಿತ್ತಾಟವಿದೆ. ಅವರಲ್ಲಿ ಗುಂಪುಗಾರಿಕೆ ಇದೆ. ಆದರೆ ಕಾಂಗ್ರೆಸ್‌ನಲ್ಲಿ ಇಂಥ ವಾತಾವರಣವಿಲ್ಲ, ನಮ್ಮದು ಶಿಸ್ತಿನ ಪಕ್ಷವಾಗಿದೆ ಎಂದು ತಿಳಿಸಿದರು. ... (ಕೋಟ್) ಬಸ್ ನಿಲ್ದಾಣದಲ್ಲಿ ಹಲವಾರು ಸೌಲಭ್ಯಗಳಿವೆ. 18 ಕಾರು, 200 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿದೆ. 84 ಮಳಿಗೆಗಳಿದ್ದು ಅವುಗಳಿಂದ ತಿಂಗಳಿಗೆ 5 ಲಕ್ಷ ಆದಾಯ ಬರಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಎಸ್ಕಲೇಟರ್ ಅಳವಡಿಸಲಾಗಿದೆ. ವೀರೇಶ ಕುಮಾರ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ