ಜಿಲ್ಲೆ

ಕಳೆಗಟ್ಟಿದ ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ

ರಮೇಶ ಜಹಗೀರದಾರ್

ದಾವಣಗೆರೆ : ಮೂರು ವರ್ಷಗಳ ನಂತರ ನಗರದಲ್ಲಿ ಕೆಎಸ್‌ಆರ್‌ಟಿಸಿಯ ನೂತನ ಬಸ್ ನಿಲ್ದಾಣ ಸಾರ್ವಜನಿಕ ಸೇವೆಗೆ ತೆರೆದುಕೊಂಡಿದೆ. ಇದುವರೆಗೆ ತಾತ್ಕಾಲಿಕವಾಗಿ ಹೈಸ್ಕೂಲ್ ಮೈದಾನದಲ್ಲಿ ನಿಲುಗಡೆ ಮಾಡುತ್ತಿದ್ದ ಬಸ್‌ಗಳು ಸೋಮವಾರ ಹೊಸ ನಿಲ್ದಾಣದಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದವು.  ಸ್ಮಾರ್ಟ್‌ಸಿಟಿ ಹಾಗೂ ಕೆಎಸ್‌ಆರ್‌ಟಿಸಿಯ ಅನುದಾನದಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾನುವಾರ ಲೋಕಾರ್ಪಣೆ ಮಾಡಿದರು. ನೂತನ ಕಟ್ಟಡ ಆಕರ್ಷಣೆಯ ಕೇಂದ್ರವಾಗಿದ್ದು ಪ್ರಯಾಣಿಕರ ಪ್ರತಿಕ್ರಿಯೆ ಉತ್ತಮವಾಗಿದೆ. ಸಾರ್ವಜನಿಕರು ನಿಲ್ದಾಣದ ಮುಂದೆ ನಿಂತು ಸೆಲ್ಫಿ ಪಡೆಯುವ ದೃಶ್ಯ ಕಂಡುಬಂದಿತು.  ದಿನಕ್ಕೆ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಬಂದು ಹೋಗುವ ಈ ನಿಲ್ದಾಣದಿಂದ 1238 ಬಸ್‌ಗಳು ನಿರ್ಗಮಿಸುತ್ತವೆ. ನೂತನ ಕಟ್ಟಡವು ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು ಪ್ರಯಾಣಿಕ ಸ್ನೇಹಿ ಸೌಲಭ್ಯಗಳಿಂದ ಕೂಡಿದೆ.  ಒಟ್ಟು 14 ಪ್ಲಾೃಟ್‌ಫಾರ್ಮ್‌ಗಳಿದ್ದು ಪ್ರತಿ ಪ್ಲಾೃಟ್‌ಫಾರ್ಮ್‌ನಲ್ಲಿ 4 ಬಸ್‌ಗಳು ಏಕ ಕಾಲದಲ್ಲಿ ನಿಲ್ಲುತ್ತವೆ. ಶುದ್ಧ ಕುಡಿಯುವ ನೀರು, ಕ್ಯಾಂಟೀನ್, ಶೌಚಗೃಹ, ಮಹಿಳೆಯರಿಗಾಗಿ ಮಗು ಪೋಷಣೆಯ ಕೊಠಡಿ ಇದೆ.  ನೆಲ ಮಹಡಿಯಲ್ಲಿ ದ್ವಿಚಕ್ರ ಮತ್ತು 4 ಚಕ್ರದ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 107 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದ್ದು ಭದ್ರತೆಗೆ ಆದ್ಯತೆ ನೀಡಲಾಗಿದೆ. ಪೋಲಿಸ್ ಚೌಕಿಗೂ ಜಾಗ ಕಲ್ಪಿಸಲಾಗಿದೆ. ಮುಂಗಡ ಟಿಕೆಟ್ ಕಾಯ್ದಿರಿಸುವ ಮತ್ತು ಪಾಸ್ ಕೌಂಟರ್ ಇದೆ. 22 ವಾಣಿಜ್ಯ ಮಳಿಗೆಗಳಿವೆ.  ಪ್ರಯಾಣಿಕರು ಕುಳಿತುಕೊಳ್ಳಲು ಕಲ್ಲಿನ ಹಾಗೂ ಸ್ಟೀಲ್ ಆಸನಗಳಿವೆ. ಸಿಬ್ಬಂದಿ ಉಳಿದುಕೊಳ್ಳಲು ವ್ಯವಸ್ಥೆ, ಡಾರ್ಮಿಟರಿ ಸೌಲಭ್ಯವಿದೆ. ಪ್ಲಾೃಟ್‌ಫಾರ್ಮ್‌ನಲ್ಲಿ ಡಿಸ್‌ಪ್ಲೇ ಬೋರ್ಡ್‌ಗಳನ್ನು ಅಳವಡಿಸಲಾಗಿದ್ದು ಬಸ್‌ಗಳು ಬರುವ ಸಮಯ, ನಿಲ್ಲುವ ಜಾಗದ ಮಾಹಿತಿಯನ್ನು ಅದರಲ್ಲಿ ಒದಗಿಸಲು ಯೋಜಿಸಲಾಗಿದೆ. ಮಾಲ್, 3 ಮಲ್ಟಿಪ್ಲೆಕ್ಸ್ ಥೇಟರ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ವಿಭಾಗೀಯ ಕಚೇರಿಯು ಕೆಲ ದಿನಗಳ ಹಿಂದೆಯೇ ಸ್ಥಳಾಂತರಗೊಂಡಿದೆ.