ದಾವಣಗೆರೆ : ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಎಸ್.ಎಸ್. ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಹೊಸನಾಯಕನಹಳ್ಳಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಹಕರಿಸಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೊಸನಾಯಕನಹಳ್ಳಿ ಗ್ರಾಮದಲ್ಲಿ ಟ್ರಸ್ಟ್‌ನಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರಕ್ಕೆ ಡಾ.ಪ್ರಭಾ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದಿರುವ ಕುರಿತು ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಗಮನ ಸೆಳೆದರು.
ಬಸ್ ಇಲ್ಲದ ಕಾರಣ ನಗರಕ್ಕೆ ತೆರಳಲು ಒಂದು ಕಿಲೋಮೀಟರ್ ನಡೆದುಕೊಂಡು ಹೋಗಬೇಕು. ಇದರಿಂದ ಗ್ರಾಮದ ಜನತೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಿದೆ. ಬಸ್ ಸೌಕರ್ಯ ಒದಗಿಸಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಮಸ್ಯೆ ಕುರಿತು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಗಮನಕ್ಕೆ ತಂದರು. ತಕ್ಷಣವೇ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲು ಸೂಚಿಸಿದರು. ಶುಕ್ರವಾರದಿಂದ ಗ್ರಾಮಕ್ಕೆ ಬಸ್ ಸಂಚಾರ ಪ್ರಾರಂಭವಾಗಿದ್ದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಗ್ರಾಮದ ಮುಖಂಡರಾದ ದೇವೇಂದ್ರಪ್ಪ, ಗಿರೀಶ್, ರವಿಕುಮಾರ್, ಸಂತೋಷ್ ಇತರರು ಇದ್ದರು.