ಜಿಲ್ಲೆ

ಡಿಸೆಂಬರ್‌ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಉದ್ಘಾಟನೆ

ರಮೇಶ ಜಹಗೀರದಾರ್

ದಾವಣಗೆರೆ : ನಗರದಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ಮರು ಅಭಿವೃದ್ಧಿಯಾಗುತ್ತಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಉದ್ಘಾಟನೆಯನ್ನು ಡಿಸೆಂಬರ್ ಅಂತ್ಯಕ್ಕೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
 ಬಸ್ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಯೋಜನೆಗೆ ಶೇ. 75ರಷ್ಟು ಅನುದಾನವನ್ನು ಸ್ಮಾರ್ಟ್ ಸಿಟಿಯಿಂದ, ಶೇ. 25ರಷ್ಟನ್ನು ಕೆ.ಎಸ್.ಆರ್.ಟಿ.ಸಿ.ಯಿಂದ ಒದಗಿಸಲಾಗಿದೆ ಎಂದು ತಿಳಿಸಿದರು.
 ಈ ನಿಲ್ದಾಣವನ್ನು 6.5 ಎಕರೆ ಜಾಗದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. 41 ಬಸ್‌ಗಳು ನಿಲ್ಲುವಷ್ಟು ಜಾಗವಿದೆ. ಈಗಾಗಲೇ ಶೇ. 79ರಷ್ಟು ಕಾಮಗಾರಿ ಮುಗಿದಿದೆ. ಡಿಸೆಂಬರ್ ಹೊತ್ತಿಗೆ ಬಾಕಿ ಕೆಲಸ ಪೂರ್ಣಗೊಳ್ಳಲಿದೆ ಎಂದರು.
 ನೂತನ ಕಟ್ಟದಲ್ಲಿ 3 ಮಾಲ್‌ಗಳು, ಹೋಟೆಲ್, ಚಿತ್ರಮಂದಿರ, ಕಾರುಗಳ ನಿಲುಗಡೆಗೆ ವ್ಯವಸ್ಥೆ ಇರಲಿದೆ. ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಈ ನಿಲ್ದಾಣ ಮಧ್ಯ ಕರ್ನಾಟಕದಲ್ಲಿ ಇರುವುದರಿಂದ ಉತ್ತರ ಕರ್ನಾಟಕದಿಂದ ಬರುವ ಬಸ್‌ಗಳಿಗೂ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
 ಬಸ್ ನಿಲ್ದಾಣಕ್ಕೆ ಸಾಮಾನ್ಯವಾಗಿ ಹೆಸರಿಡುವುದಿಲ್ಲ, ಸ್ಥಳೀಯವಾಗಿ ಅಂಥ ಬೇಡಿಕೆ ಬಂದರೆ ಪರಿಶೀಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 ಈ ಹಿಂದೆ ಮಾಜಿ ಶಾಸಕ ಪಂಪಾಪತಿ ಈ ನಿಲ್ದಾಣವನ್ನು ಕಟ್ಟಿಸಿದ್ದರು. 2017ರಲ್ಲಿ ತಾವು ಸಾರಿಗೆ ಸಚಿವರಿದ್ದಾಗ ಈ ನಿಲ್ದಾಣಕ್ಕೆ ಭೇಟಿ ನೀಡಿ ಮರು ಅಭಿವೃದ್ಧಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ನೆನಪು ಮಾಡಿಕೊಂಡರು.
 ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್ ಇದ್ದರು.
 ...
 * ಹೈಟೆಕ್ ಆಗಲಿದೆ ನಿಲ್ದಾಣ
 ಬಸ್ ನಿಲ್ದಾಣವನ್ನು ಹೈಟೆಕ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
 1982 ರಲ್ಲಿ ಪಂಪಾಪತಿ ಅವರು ಸತ್ಯಾಗ್ರಹ ಮಾಡಿ ಬಸ್ ನಿಲ್ದಾಣ ಬರಲು ಕಾರಣವಾಗಿದ್ದರು. ನಮ್ಮ ಅವಧಿಯಲ್ಲಿ ಅದನ್ನು ಆಧುನೀಕರಣ ಮಾಡುವ ಅವಕಾಶ ದೊರೆತಿದ್ದರಿಂದ ಸಂತೋಷವಾಗಿದೆ ಎಂದು ತಿಳಿಸಿದರು.
 ಕಳೆದ ಬಾರಿ ನಮ್ಮ ಸರ್ಕಾರ ಇದ್ದಿದ್ದರೆ ಕೆ.ಎಸ್.ಆರ್.ಟಿ.ಸಿ.ಯಿಂದಲೇ ಹಣ ತರುತ್ತಿದ್ದೆ. ಈ ಅನುದಾನವನ್ನು ಉಳಿಸಿ ಬೇರೆ ಯಾವುದಾದರೂ ಯೋಜನೆಗೆ ಬಳಸಬಹುದಾಗಿತ್ತು. ಆದರೆ ಆಗ ಅಧಿಕಾರದಲ್ಲಿ ಇದ್ದವರು ಆ ರೀತಿಯಾಗಿ ಯೋಚನೆ ಮಾಡಲಿಲ್ಲ. ಖಾಸಗಿ ಬಸ್ ನಿಲ್ದಾಣವನ್ನು ಹಾಳು ಮಾಡಿದರು ಎಂದು ಟೀಕಿಸಿದರು.
 ಜಗಳೂರು ರಸ್ತೆಯ ಬಸ್ ನಿಲ್ದಾಣ ಕಾಮಗಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದೆ. ಅದೂ ಸೇರಿ ಎರಡೂ ನಿಲ್ದಾಣಗಳನ್ನು ಡಿಸೆಂಬರ್‌ನಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
 ಬಿಜೆಪಿ ಆಡಳಿತದ ಅವಧಿಯಲ್ಲಿ ನಗರದ ವೃತ್ತಗಳು, ರಿಂಗ್ ರಸ್ತೆಗೆ ಯಾರದೋ ಹೆಸರು ನಾಮಕರಣ ಮಾಡಿದರು. ನಿಜವಾಗಿಯೂ ಕೊಡುಗೆ ನೀಡಿದವರ ಹೆಸರಿಟ್ಟರೆ ತಮ್ಮ ಅಭ್ಯಂತರವೇನೂ ಇಲ್ಲ ಎಂದರು.
 ಬೇತೂರು ಹಳ್ಳದ ಬಳಿ ತಾತ್ಕಾಲಿಕ ರಕ್ಷಣಾ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ, ಮುಂಬರುವ ದಿನಗಳಲ್ಲಿ ಅಲ್ಲಿ ಹೊಸ ಸೇತುವೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
 ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ, ಸ್ಥಳ ಅಂತಿಮಗೊಂಡ ನಂತರ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
 ...