ದಾವಣಗೆರೆ : ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ 2025-26ನೇ ಸಾಲಿನ 1.03 ಕೋಟಿ ರೂ.ಗಳ ಉಳಿತಾಯ ಬಜೆಟ್ ಅನ್ನು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಶನಿವಾರ ಮಂಡಿಸಿದರು. ಪ್ರಸ್ತುತ ಸಾಲಿನಲ್ಲಿ ಪ್ರಾಧಿಕಾರಕ್ಕೆ 185.44 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗಾಗಿ 184.40 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಹೊಸ ಕಾಮಗಾರಿಗಳಿಗೆ 12 ಕೋಟಿ ರೂ. ಕಾಯ್ದಿರಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ವೃತ್ತಗಳನ್ನು ಅಭಿವೃದ್ಧಿಪಡಿಸಲು 25 ಲಕ್ಷ ರೂ. ನಿಗದಿ ಮಾಡಲಾಗಿದೆ. ಬೀರೂರು ಸಮ್ಮಸಗಿ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತ, ಪ್ರತಿಮೆ ಅಭಿವೃದ್ಧಿಪಡಿಸಲು 25 ಲಕ್ಷ ರೂ, ಹರಿಹರ ನಗರದ ನದಿ ದಂಡೆಯ ಬಳಿ ಸರ್ವಜ್ಞನ ಮೂರ್ತಿ ನಿರ್ಮಿಸಲು 25 ಲಕ್ಷ ರೂ. ಮೀಸಲಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಬಿ.ಪಿ. ಹರೀಶ್, ಕೆ.ಎಸ್. ಬಸವಂತಪ್ಪ, ಎಂಎಲ್ಸಿ ಅಬ್ದುಲ್ ಜಬ್ಬಾರ್, ದೂಡಾ ಸದಸ್ಯರಾದ ವಾಣಿ ಬಕ್ಕೇಶ್, ಜಬ್ಬಾರ್ ಖಾನ್, ಮಂಜುನಾಥ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಹೆಚ್ಚುವರಿ ಎಸ್ಪಿ ವಿಜಯ ಕುಮಾರ ಸಂತೋಷ್, ದೂಡಾ ಆಯುಕ್ತ ಹುಲ್ಲುಮನೆ ತಿಮ್ಮಣ್ಣ ಇದ್ದರು. ... (ಬಾಕ್ಸ್) ಕೆರೆಗಳ ಪುನರುಜ್ಜಿವನ ಪ್ರಾಧಿಕಾರವು ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದು, ಅದಕ್ಕಾಗಿ 6.60 ಕೋಟಿ ರೂ. ಕಾಯ್ದಿರಿಸಿದೆ. ತಾಲೂಕಿನ ವಡ್ಡಿನಹಳ್ಳಿ ಕೆರೆ ಅಭಿವೃದ್ಧಿಗಾಗಿ 2 ಕೋಟಿ, ಹೊನ್ನೂರು ಕೆರೆ ಅಭಿವೃದ್ಧಿಗಾಗಿ 2.30 ಕೋಟಿ, ನಾಗನೂರು ಕೆರೆಯನ್ನು ಆಧುನೀಕರಣ ಗೊಳಿಸಲು 2.30 ಕೋಟಿ ರೂ. ಕಾಯ್ದಿರಿಸಲಾಗಿದೆ. ಉದ್ಯಾನವನಗಳ ಅಭಿವೃದ್ಧಿಗಾಗಿ 3.30 ಕೋಟಿ ರೂ. ಇಡಲಾಗಿದೆ. ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಅಮರ್ ಜವಾನ್ ಉದ್ಯಾನವನದಲ್ಲಿ ಯೋಗಾ ಪ್ಲಾಟ್ಫಾರ್ಮ್ ನಿರ್ಮಿಸಿ, ಜಿಮ್ ಸಾಮಗ್ರಿಗಳನ್ನು ಅಳವಡಿಸುವ ಕಾಮಗಾರಿಗೆ 25 ಲಕ್ಷ ರೂ. ನಿಗದಿಗೊಳಿಸಲಾಗಿದೆ. ಹರಿಹರ ತಾಲೂಕು ಅಮರಾವತಿಯ ಉದ್ಯಾನವನ ಅಭಿವೃದ್ಧಿಗೆ 1 ಕೋಟಿ, ಮಹಜೇನಹಳ್ಳಿ ಗ್ರಾಮದ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ, ನಗರದ ಡಿ.ಸಿ.ಎಂ. ಲೇಔಟ್‌ನ ಶಿವರಾಂ ಕಾರಂತ ಉದ್ಯಾನವನದ ಅಭಿವೃದ್ಧಿಗಾಗಿ 75 ಲಕ್ಷ ರೂ. ಕಾಯ್ದಿರಿಸಲಾಗಿದೆ.