ಜಿಲ್ಲೆ

ಪಾಲಿಕೆ ಬಜೆಟ್ ಅಂದಾಜು ಪಟ್ಟಿ ತಯಾರಿ ಸಲಹಾ ಸಭೆ

ರಮೇಶ ಜಹಗೀರದಾರ್

ದಾವಣಗೆರೆ : ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಬೇಕು, ಪಾಲಿಕೆ ಮುಂಭಾಗದಲ್ಲಿ ಬಸ್ ಮತ್ತು ಆಟೋಗಳನ್ನು ನಿಲುಗಡೆ ಮಾಡದಂತೆ ಕ್ರಮ ವಹಿಸಬೇಕು ಹಾಗೂ ಸಲಹೆಗಳು ಬಜೆಟ್‌ನಲ್ಲಿ ಕಾರ್ಯಗತಗೊಳ್ಳಬೇಕು ಎಂದು ಸಾರ್ವಜನಿಕರು ಮಹಾನಗರ ಪಾಲಿಕೆ ಮಹಾಪೌರರನ್ನು ಒತ್ತಾಯಿಸಿದರು.
 ಮಹಾನಗರ ಪಾಲಿಕೆ 2024-25ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿ ತಯಾರಿ ಸಂಬಂಧ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಲಹಾ ಸಭೆಯಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ ಹಲವರು ಪಾಲಿಕೆ ಗಮನ ಸೆಳೆದರು.
 ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ, ನಗರಾದ್ಯಂತ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಮೇಲೆ ನಿತ್ಯ ದಾಳಿ ನಡೆಸುತ್ತಿವೆ. ವಾಹನ ಸವಾರರು ಬಿದ್ದು ಗಾಯಗೊಳ್ಳುವಂತಾಗಿದೆ. ಆರೋಗ್ಯ ಇಲಾಖೆ ಈ ಬಗ್ಗೆ ನಿರ್ಲಕ್ಷೃ ವಹಿಸಿದೆ. ಈ ಬಗ್ಗೆ ತಕ್ಷಣ ಕ್ರಮ ವಹಿಸಬೇಕು ಎಂದರು.
 ನಗರದ ಗಡಿಯಾರ ಕಂಬ ಸೇರಿದಂತೆ ಹಲವು ಬಡಾವಣೆಗಳು ಹಾಗೂ ಸ್ಲಂ ಪ್ರದೇಶಗಳಲ್ಲಿ ಬೀದಿ ನಾಯಿಗಳು ಹಿಂಡುಹಿಂಡಾಗಿವೆ. ನಾಗರಿಕರು ರಾತ್ರಿವೇಳೆ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಬೀದಿ ನಾಯಿಗಳನ್ನು ಮೊದಲು ನಿಯಂತ್ರಿಸಬೇಕು ಎಂದು ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಗೌಡ್ರು ಚನ್ನಬಸಪ್ಪ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಫಕೃದ್ದೀನ್ ಧ್ವನಿಗೂಡಿಸಿದರು.
 ಮಹಾಪೌರ ವಿನಾಯಕ ಪೈಲ್ವಾನ್ ಪ್ರತಿಕ್ರಿಯಿಸಿ, ಪಾಲಿಕೆಯಿಂದ ಪ್ರತಿವರ್ಷ 50 ಲಕ್ಷ ರೂ.ಗಳನ್ನು ತೆಗೆದಿರಿಸುವ ಮೂಲಕ ಬೀದಿ ನಾಯಿಗಳಿಗೆ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ  ನಡೆಸಲಾಗುತ್ತಿದೆ. ಪ್ರಸಕ್ತ ವರ್ಷ 45 ಲಕ್ಷ ರೂ. ಟೆಂಡರ್ ನೀಡಲಾಗಿದ್ದು, ಶೀಘ್ರ ಆಪರೇಷನ್ ಕಾರ್ಯ ಕೈಗೊಳ್ಳಲು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
 ನಾಗೇಂದ್ರ ಬಂಡೀಕರ್ ಮಾತನಾಡಿ, ಮಹಾನಗರ ಪಾಲಿಕೆ ಮುಂಭಾಗದಲ್ಲಿ ನಗರ ಸಾರಿಗೆ ಬಸ್ ಹಾಗೂ ಆಟೋಗಳನ್ನು ನಿಲುಗಡೆ ಮಾಡುವುದಲ್ಲದೆ, ರಸ್ತೆಯ ಮುಕ್ಕಾಲು ಭಾಗ ವಾಹನಗಳು ಅಡ್ಡ ನಿಲ್ಲುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಇದರಿಂದ ಅಪಘಾತಗಳೂ ಸಂಭವಿಸುತ್ತಿವೆ. ಈ ಬಗ್ಗೆ ಸಂಚಾರಿ ಪೊಲೀಸರಿಗೆ ದೂರು ನೀಡಿ ಬಸ್ ಹಾಗೂ ಆಟೋ ನಿಲುಗಡೆ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 ಅಲ್ಲದೆ ನಗರದಲ್ಲಿ ನನೆಗುದಿಗೆ ಬಿದ್ದಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯ ಭವನಗಳನ್ನು ಪೂರ್ಣಗೊಳಿಸಬೇಕು, ಪುಟ್ಟಣ್ಣ ಕಣಗಾಲ್ ವಾದ್ಯ ಮಂಟಪದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಲು ಪಾಲಿಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಹಾಗೂ ಪುಟ್ಟಣ್ಣ ಕಣಗಾಲ್‌ರ ಕಂಚಿನ ಪುತ್ಥಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
 ಗಾಂಧೀಜಿ ಹರಿಜನ ಯುವಕ ಸಂಘದ ಮುಖಂಡ ಸೋಮ್ಲಾಪುರ ಹನುಮಂತಪ್ಪ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಕಾಟಾಚಾರಕ್ಕೆ ಸಲಹಾ ಸಭೆ ನಡೆಸಲಾಗುತ್ತಿದ್ದು, ಬಜೆಟ್‌ನಲ್ಲಿ ಅನುಷ್ಠಾನಗೊಳ್ಳುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ಸಲಹಾ ಸಭೆಗೆ ಬರದಂತಾಗಿದೆ. ಸಾರ್ವಜನಿಕರ ಸಲಹೆಗಳನ್ನು ಬಜೆಟ್‌ನಲ್ಲಿ ಕಾರ್ಯಗತಗೊಳಿಸಬೇಕು ಎಂದು ಹೇಳಿದರು.
 ಪೌರ ಕಾರ್ಮಿಕರ ಸಂಘಟನೆ ರಾಜ್ಯ ವಿಭಾಗೀಯ ಕಾರ್ಯದರ್ಶಿ ಎಲ್.ಎಚ್.ಸಾಗರ್ ಮಾತನಾಡಿ, ದಾವಣಗೆರೆ ದಕ್ಷಿಣ ಭಾಗದಲ್ಲಿ ವಿಶಾಲ ಪಾರ್ಕ್, ಕುಂದುವಾಡ ಕೆರೆಯಲ್ಲಿ ಬೋಟಿಂಗ್, ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಬರ್ನಿಂಗ್ ಮಿಷನ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
 ಪೌರ ಕಾರ್ಮಿಕರ ವಸತಿ ಗೃಹ ಪ್ರದೇಶದಲ್ಲಿ ಸುಸಜ್ಜಿತ ರಸ್ತೆ ಹಾಗೂ ಸಮುದಾಯ ಆಸ್ಪತ್ರೆ ನಿರ್ಮಿಸಬೇಕು. ಪೌರ ಕಾರ್ಮಿಕರಿಗೆ ಗುರುತಿನ ಚೀಟಿ ಹಾಗೂ ಪೌಷ್ಟಿಕ ಉಪಾಹಾರ ನೀಡಬೇಕು ಎಂದರು.
 ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಫಕೃದ್ದೀನ್ ಮಾತನಾಡಿ, ಪಾಲಿಕೆಯಿಂದ ಪತ್ರಕರ್ತರ ಕ್ಷೇಮನಿಧಿ ಸ್ಥಾಪಿಸಿ 10 ಲಕ್ಷ ರೂ ಮೀಸಲಿಟ್ಟಿದ್ದು, ಈವರೆಗೂ ಬಳಕೆ ಆಗಿಲ್ಲ. ಬರುವ ಬಜೆಟ್‌ನಲ್ಲಿ ನಿಧಿಯ ಮೊತ್ತವನ್ನು 20 ಲಕ್ಷ ರೂ.ಗೆ ಹೆಚ್ಚಿಸಬೇಕು ಹಾಗೂ ಸಮಿತಿ ರಚಿಸಿ ಸಂಕಷ್ಟದಲ್ಲಿರುವ ಪತ್ರಕರ್ತರ ನೆರವಿಗೆ ಬರಬೇಕು. ಕಟ್ಟಡ ಪರವಾನಗಿ ನೀಡುವಾಗ ಎರಡು ಸಸಿ ಬೆಳೆಸುವುದನ್ನು ಕಡ್ಡಾಯಗೊಳಿಸಬೇಕು ಎಂದು ತಿಳಿಸಿದರು.
 ಪಾಲಿಕೆ ಸಿಎಒ ಪ್ರಿಯಾಂಕಾ ಇದ್ದರು.