ಜಿಲ್ಲೆ

ಆಂತರಿಕ ಶಕ್ತಿ ವೃದ್ಧಿಗೆ ರಾಜಯೋಗ ಸಹಕಾರಿ

ರಮೇಶ ಜಹಗೀರದಾರ್

ದಾವಣಗೆರೆ :  ವೇಗ ಮತ್ತು ಒತ್ತಡದ ಜೀವನ ಶೈಲಿಯ ನಡುವೆ ನಮ್ಮ ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿವಿ ದಾವಣಗೆರೆ ಶಾಖೆಯ 50ನೇ ವರ್ಷಾಚರಣೆ ಸ್ಮರಣಾರ್ಥ ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಶಿವ ಧ್ಯಾನ ಮಂದಿರದಲ್ಲಿ ಶುಕ್ರವಾರ, ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದರು.  ಆಂತರಿಕವಾಗಿ ಗಟ್ಟಿಯಾದಾಗ ಎಂಥದೇ ಪರಿಸ್ಥಿತಿ ಬಂದರೂ ನಿಭಾಯಿಸುವ ಶಕ್ತಿ ನಮಗಿರುತ್ತದೆ. ನಾವು ನಿರೀಕ್ಷಿಸುವ ಬದಲಾವಣೆ ಮೊದಲು ನಮ್ಮಲ್ಲಿ ಆಗಬೇಕು. ಪರಸ್ಪರರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.  ಒತ್ತಡದ ಪರಿಣಾಮವಾಗಿ ಜೀವನಶೈಲಿಯ ಕಾಯಿಲೆಗಳು ಬಾಧಿಸುತ್ತಿವೆ. ಪೈಪೋಟಿ ಮತ್ತು ಆಧುನಿಕತೆಯ ನಡುವೆ ಆಂತರಿಕ ಶಕ್ತಿ ಕಡಿಮೆಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಧ್ಯಾನ, ರಾಜಯೋಗಗಳು ನಮಗೆ ಸರಿಯಾದ ಮಾರ್ಗ ತೋರುತ್ತವೆ ಎಂದು ಅಭಿಪ್ರಾಯಪಟ್ಟರು.  ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ 140 ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ವಸುಧೈವ ಕುಟುಂಬಕಂ ತತ್ವದಲ್ಲಿ ನಂಬಿಕೆ ಇಟ್ಟಿದೆ. ಶಾಂತಿ, ಭ್ರಾತೃತ್ವ, ಸಮಾನತೆ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತ ಬಂದಿದೆ. ಜಾಗತಿಕ ಮಟ್ಟದಲ್ಲಿ ಯುದ್ಧಗಳ ಕಾರ್ಮೋಡ ಕವಿದಿರುವ ಈ ಹೊತ್ತಿನಲ್ಲಿ ಬ್ರಹ್ಮಾಕುಮಾರಿ ಸಂಸ್ಥೆಯ ವಿಚಾರಗಳು ಸಕಾಲಿಕವಾಗಿವೆ ಎಂದರು.  ಬ್ರಹ್ಮಾಕುಮಾರಿ ಸಂಸ್ಥೆಯು ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಜತೆಗೆ ಮಹಿಳಾ ಸಬಲೀಕರಣ, ಪರಿಸರ, ಶಿಕ್ಷಣ ಇನ್ನಿತರ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದೆ. ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುವ ವ್ಯವಸ್ಥೆ ಇಲ್ಲಿದೆ ಎಂದು ತಿಳಿಸಿದರು.  ಬ್ರಹ್ಮಾಕುಮಾರಿ ಸಂಸ್ಥೆಯ ಜ್ಞಾನೇಶ್ವರಿಜಿ, ವೀಣಾಜಿ, ಅಂಚೆ ಇಲಾಖೆ ಅಧಿಕಾರಿಗಳಾದ ಜಿ.ಎಸ್. ಗುರುಪ್ರಸಾದ್, ನರೇಂದ್ರ ನಾಯ್ಕ ಇದ್ದರು. ಇ.ಎಂ. ಮಂಜುನಾಥ ವಂದಿಸಿದರು.  ...    (ಬಾಕ್ಸ್)  ಒಬ್ಬನೇ ಪರಮಾತ್ಮ  ಈ ಸೃಷ್ಟಿಯಲ್ಲಿರುವುದು ಒಬ್ಬನೇ ಪರಮಾತ್ಮ. ಎಲ್ಲ ಧರ್ಮಗಳು ಅದನ್ನೇ ಹೇಳಿವೆ ಎಂದು ಬ್ರಹ್ಮಾಕುಮಾರಿ ಸಂಸ್ಥೆಯ ದಾವಣಗೆರೆ ಶಾಖೆಯ ಮುಖಸ್ಥೆ ಲೀಲಾಜಿ ಹೇಳಿದರು.  ಧರ್ಮ ಯುದ್ಧ, ಜಾತಿ ಕಲಹಗಳು ದೂರವಾಗಬೇಕು. ಭಾವೈಕ್ಯತೆಯ ಭಾವನೆ ಎಲ್ಲರಲ್ಲಿ ಮೂಡಬೇಕು. ವಿಶ್ವ ಏಕತೆಯ ಸಂದೇಶ ಎಲ್ಲೆಡೆ ಪಸರಿಸಬೇಕು ಎಂದು ತಿಳಿಸಿದರು.  ಬ್ರಹ್ಮಾಕುಮಾರಿ ಈಶ್ವರೀಯ ವಿವಿಗೆ 90 ವರ್ಷಗಳಾಗಿವೆ. ದಾವಣಗೆರೆ ಶಾಖೆ ಆರಂಭವಾಗಿ 50 ವರ್ಷಗಳಾಗಿವೆ. ಇದರ ಅಂಗವಾಗಿ ಈ ವರ್ಷ 50 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.  ಅಂಚೆ ಇಲಾಖೆಯಲ್ಲಿ ಲಂಚವಿಲ್ಲದೇ ಜನರಿಗೆ ಸೇವೆ ಸಿಗುತ್ತಿದೆ. ಸಾಧಕ ವ್ಯಕ್ತಿಗಳು, ವಿಶೇಷ ಘಟನೆ, ಸಾಂಸ್ಕೃತಿಕ ಸಂದರ್ಭ ಇನ್ನಿತರ ವಿಷಯಗಳನ್ನು ಆಧರಿಸಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುತ್ತದೆ. ಅಂಚೆ ಚೀಟಿಗಳನ್ನು ಸಂಗ್ರಹಿಸುವುದು ಉತ್ತಮ ಹವ್ಯಾಸವಾಗಿದೆ ಎಂದು ತಿಳಿಸಿದರು.