ಜಿಲ್ಲೆ

ಪುಸ್ತಕಗಳ ಅಧ್ಯಯನದಿಂದ ಜೀವನ ಸುಂದರ

ರಮೇಶ ಜಹಗೀರದಾರ್

ದಾವಣಗೆರೆ : ಪುಸ್ತಕಗಳ ಅಧ್ಯಯನದಿಂದ ಸುಂದರ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ನಗರ ಗ್ರಂಥಾಲಯ ಉಪ ನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.  ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ ‘ಅಭಿರುಚಿ’ ಮೊಬೈಲ್ ಬಿಡಿ-ಪುಸ್ತಕ ಹಿಡಿ ಕಾರ್ಯಕ್ರಮದಲ್ಲಿ ಮಾತನಾಡಿದರು.  ಇಂದಿನ ಯುವ ಪೀಳಿಗೆ ಮೊಬೈಲ್ ನೋಡುತ್ತಾ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆದರೆ, ಪುಸ್ತಕ ಓದುವ ವ್ಯಕ್ತಿಗೆ ಎಂದಿಗೂ ಕೂಡ ಕೀಳರಿಮೆ ಹಾಗೂ ಖಿನ್ನತೆ ಬಾರದು ಎಂದು ತಿಳಿಸಿದರು.  ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಡಿಜಿಟಲ್ ಲೈಬ್ರರಿ ಮುಖ್ಯ ಪಾತ್ರ ವಹಿಸುತ್ತಿದೆ. ಅಲ್ಲದೆ ಓದುಗ ವರ್ಗಕ್ಕೆ ಸಕಾಲದಲ್ಲಿ ಅಮೂಲ್ಯ ಗ್ರಂಥಗಳನ್ನು ನೀಡುತ್ತಿದೆ. ಪುಸ್ತಕ ಓದುವ ಸಂಸ್ಕೃತಿ ಹೆಚ್ಚಿಸಲು ಕಾಲೇಜಿಗೆ ಒಂದು ಸಾವಿರ ಪುಸ್ತಕ ನೀಡುವುದಾಗಿ ಹೇಳಿದರು.  ನಿವೃತ್ತ ಡಿವೈಎಸ್‌ಪಿ ಮುರುಗನವರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿನಿಯರು ಪುಸ್ತಕಗಳು ಹಾಗೂ ದಿನಪತ್ರಿಕೆ  ಓದುವ ಮೂಲಕ ಸಮಕಾಲೀನ ಮಾಹಿತಿ ಪಡೆದುಕೊಳ್ಳಬೇಕು ಎಂದರು.  ಪ್ರಾಚಾರ್ಯೆ ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಡುವಿನ ಸಮಯದಲ್ಲಿ ಸಾಹಿತ್ಯ ಕೃತಿ ಓದುವ ಹವ್ಯಾಸ ಬೆಳೆಸಿಕೊಳ್ಳಲು  ಸಲಹೆ ನೀಡಿದರು.  ಐಕ್ಯೂಎಸಿ ಸಂಚಾಲಕ ಆರ್.ಆರ್. ಶಿವಕುಮಾರ್ ಇದ್ದರು. ಕಾಲೇಜಿನ ಗ್ರಂಥಪಾಲಕ ಎಚ್. ಸತೀಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಣಧೀರ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಆರ್.ಜಿ. ಕವಿತಾ ನಿರೂಪಿಸಿದರು.