ಹೊನ್ನಾಳಿ : ಸಾಹಿತ್ಯ ಚಟುವಟಿಕೆ ನಿರಂತರವಾಗಿರಬೇಕು ಎಂದು ಜಿಲ್ಲಾ ಚುಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಗುಂಡಗಟ್ಟಿ ಹೇಳಿದರು.
ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃತಿ ಬಿಡುಗಡೆ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ‘ಪಾಟಿಚೀಲ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಯುವಜನರು ಸಾಹಿತ್ಯ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಪ್ರೇರೇಪಣೆ ಅವಶ್ಯಕ. ಹಿರಿಯ ಸಾಹಿತಿಗಳು ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಸಹನಾದ್ರಿ ಪ್ರಕಾಶನದ ಪ್ರಕಾಶಕ, ಸಾಹಿತಿ ಡಾ. ಕೊಟ್ರೇಶ್ ಉತ್ತಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಸಾಹಿತ್ಯ ಚಟುವಟಿಕೆ ಕಡಿಮೆಯಾಗುತ್ತಿದ್ದು, ವಿವಿಧ ಪರಿಷತ್‌ಗಳ ಪದಾಧಿಕಾರಿಗಳು ಸಕ್ರಿಯರಾಗಿ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು ಎಂದರು.
ಚುಸಾಪ ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ವೀರಭದ್ರಪ್ಪ ತೆಲಿಗಿ ಮಾತನಾಡಿ, ಕವಿ ಚನ್ನೇಶ್ ಉತ್ತಂಗಿ ಅವರ ಪಾಟಿಚೀಲ ಕೃತಿಯನ್ನು ಹೊರತರುವ ಮೂಲಕ ಸಹನಾದ್ರಿ ಪ್ರಕಾಶನ ಯುವ ಬರಹಗಾರರನ್ನು ಪ್ರೇರೇಪಿಸುವ ಕೆಲಸ ಮಾಡಿದೆ ಎಂದು ಶ್ಲಾಘಿಸಿದರಲ್ಲದೆ, ಕವಿತೆ ಎಂಬುದು ಬೀಜದೊಳಗಿನ ಮರ ಹಾಗೂ ಕಾಣದ ಬೇರಿನಂತೆ ಇದ್ದು, ಹೊರತರುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಪರಿಸರವಾದಿ ಪ್ರೇಂಕುಮಾರ್ ಬಂಡಿಗಡಿ ಅವರು ನಿರ್ಮಲ ತುಂಗಭದ್ರಾ ಅಭಿಯಾನದ ಕರಪತ್ರ ಪ್ರದರ್ಶಿಸಿ ಮಾತನಾಡಿ, ತುಂಗಭದ್ರಾ ನದಿ ಕಲುಷಿತಗೊಂಡಿದ್ದು, ಅದಕ್ಕಾಗಿ ಶೃಂಗೇರಿಯಿಂದ ಕಿಷ್ಕಿಂಧೆಗೆ 400 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದು ಕೇವಲ ನದಿಯ ಸ್ವಚ್ಛತೆಗಷ್ಟೇ ಅಲ್ಲ, ನಮ್ಮ ಆರೋಗ್ಯದ ಪ್ರಶ್ನೆಯೂ ಆಗಿದೆ. ಆರೋಗ್ಯದ ಜತೆಗೆ ಭಾಷೆ ಉಳಿವಿಗೆ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಕವಿ ಚನ್ನೇಶ್ ಉತ್ತಂಗಿ, ಉಪನ್ಯಾಸಕ ಮಂಜುನಾಥ್ ಗೊಲ್ಲರಹಳ್ಳಿ, ಕಸಾಪ ತಾಲೂಕು ಅಧ್ಯಕ್ಷ ಮುರಿಗೆಪ್ಪಗೌಡ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ. ಲೋಕೇಶ್, ಮನು ದುಮ್ಮಿ ಮಾತನಾಡಿದರು.
ತಾಲೂಕು ಚುಸಾಪ ಅಧ್ಯಕ್ಷ ಎನ್.ಕೆ. ಆಂಜನೇಯ, ಸ್ಪೂರ್ತಿ ಪ್ರಕಾಶನ ತೆಲಿಗಿಯ ಅಧ್ಯಕ್ಷ ಎಂ. ಬಸವರಾಜ, ಸೋಮಶೇಖರ್ ಇದ್ದರು. ನಂತರ ಜಿಲ್ಲಾಮಟ್ಟದ ಕವಿಗೋಷ್ಠಿ ನಡೆಯಿತು.