ಜಿಲ್ಲೆ

ಪಠ್ಯಗಳು ಸಾಹಿತ್ಯದ ಅಭಿರುಚಿ ಮೂಡಿಸಬೇಕು

ರಮೇಶ ಜಹಗೀರದಾರ್

ದಾವಣಗೆರೆ : ಕನ್ನಡ ಪಠ್ಯಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಬೇಕು ಎಂದು ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಹೇಳಿದರು.  ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ರಾಜ್ಯ ಶಿಕ್ಷಣ ನೀತಿಯ ಪದವಿ ಕನ್ನಡ ಭಾಷಾ ಪಠ್ಯ ಪುಸ್ತಕಗಳ ಬಿಡುಗಡೆ ಹಾಗೂ ಕಾರ್ಯಾಗಾರದಲ್ಲಿ ಮಾತನಾಡಿದರು.  ಪಠ್ಯಗಳು ಅಧ್ಯಾಪಕರಿಗೆ ಪ್ರಿಯವಾಗುವ ಜತೆಗೆ ವಿದ್ಯಾರ್ಥಿಗಳಿಗೂ ಇಷ್ಟವಾಗಬೇಕು. ಸಾಹಿತ್ಯ ಓದಬೇಕು ಎಂಬ ತುಡಿತ ಬರಬೇಕು. ಅಭಿರುಚಿ ನಿರ್ಮಾಣಗೊಳ್ಳುವ ತರಗತಿ ಹಾಗೂ ಪ್ರೀತಿಯಿಂದ ಕಲಿಯುವ ಕ್ರಮದಲ್ಲಿ ನಮ್ಮೊಳಗಿನ ಮಾನವೀಯತೆ, ಮನುಷ್ಯ ಸಂಬಂಧಗಳು ಅರಳುತ್ತವೆ ಎಂದು ತಿಳಿಸಿದರು.  ವಿದ್ಯಾರ್ಥಿಗಳಿಗೆ ಜ್ಞಾನ ಧಾರೆಯೆರೆಯುವ ಮಾರ್ಗ ಪಠ್ಯಗಳಾಗಿದ್ದು, ಅಧ್ಯಾಪಕರು ಇವುಗಳ ಮೂಲಕ ತಮ್ಮ ಅರಿವು, ಆಲೋಚನೆ ಹಾಗೂ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು. ಆ ಮೂಲಕ ಅವರೊಳಗಿನ ಮಾನವೀಯ ಸಂವೇದನೆ ಜೀವಂತವಾಗಿಡುವುದು ಅಧ್ಯಾಪಕರ ಕರ್ತವ್ಯ ಎಂದರು.  ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳು ತರಗತಿಗಳಲ್ಲಿ ಕುಳಿತುಕೊಳ್ಳುತ್ತಿಲ್ಲ. ತುಂಬಾ ಆಕರ್ಷಿತವಾದ  ತಂತ್ರಜ್ಞಾನಗಳು, ಮಾಧ್ಯಮಗಳು ನಿರ್ಮಾಣಗೊಂಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಏಕಮುಖ ಪಾಠ ಪ್ರವಚನಗಳಿಂದ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಂಡಿದ್ದು, ಅವರನ್ನು ತರಗತಿಗಳಲ್ಲಿ ಕೂರಿಸಿಕೊಳ್ಳಲು ಆಸಕ್ತಿದಾಯಕ ರೀತಿಯಲ್ಲಿ ಸಂವಾದ ನಡೆಸಬೇಕು ಎಂದು ಹೇಳಿದರು.  ಪಠ್ಯಗಳಿಗೆ ಸಾಹಿತ್ಯ ಆಯ್ಕೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ದೃಷ್ಠಿಕೋನ ಮುಖ್ಯವಾಗಬೇಕು. ಎಲ್ಲ ಮಿತಿಗಳ ನಡುವೆ ಇಲ್ಲಿ ಬಿಡುಗಡೆಗೊಂಡ ಪಠ್ಯಗಳು ಶೇ.75ರಷ್ಟು ಸಾರ್ಥಕತೆ ಪಡೆದಿದ್ದು, ಉತ್ತಮ ವಿನ್ಯಾಸದೊಂದಿಗೆ ಸುಂದರವಾಗಿ ಮುದ್ರಣಗೊಂಡಿವೆ. ಮುಂದಿನ ದಿನಗಳಲ್ಲಿ ಎಲ್ಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಸೇರ್ಪಡೆ ಆಗಬೇಕು ಎಂದು ತಿಳಿಸಿದರು.  ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಪಠ್ಯಪುಸ್ತಕಗಳ ಬಿಡುಗಡೆಗೊಳಿಸಿ ಮಾತನಾಡಿ, ಪ್ರಸ್ತುತ ಕನ್ನಡ ಓದುವವರ ಸಂಖ್ಯೆ ಕಡಿಮೆಯಾಗಿದ್ದು, ಹೆಸರಿಗೆ ಮಾತ್ರ ಕನ್ನಡ ಪಠ್ಯ ಕಲಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಕನ್ನಡ ಭಾಷೆಯ ಬಗ್ಗೆ ಅಭಿರುಚಿ ಬೆಳೆಸಬೇಕು ಎಂದರು.  ಇನ್ನು ವಿಜ್ಞಾನ ವಿದ್ಯಾರ್ಥಿಗಳು ಕನ್ನಡ ಓದುವುದು ಬಹಳ ಕಡಿಮೆ. ಅವರಿಗೆ ಪಠ್ಯಗಳಲ್ಲಿ ಸರಳ ಕನ್ನಡ ಸಾಹಿತ್ಯ ಅಳವಡಿಸಬೇಕು. ಪಠ್ಯಪುಸ್ತಕಗಳ ರಚನೆ ಸಂದರ್ಭದಲ್ಲಿ ಯಾವುದೇ ಲೋಪ ಆಗದಿರಲು ಕನ್ನಡ ಹಾಗೂ ಇಂಗ್ಲೀಷ್ ಹಿರಿಯ ಪ್ರಾಧ್ಯಾಪಕರ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಸಲಹೆ ನೀಡಿದರು.  ಕಾರ್ಯಾಗಾರದಲ್ಲಿ ಸುಮಾರು 30 ಅಧ್ಯಾಪಕರು ಪಾಲ್ಗೊಂಡಿದ್ದಾರೆ. ಭಾಗವಹಿಸದ ಕನ್ನಡ ಅಧ್ಯಾಪಕರ ಮೇಲೆ ಕ್ರಮ ಕೈಗೊಳ್ಳುವ ವ್ಯವಸ್ಥೆ ಆಗಬೇಕಿದೆ ಎಂದು ಹೇಳಿದರು.   ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ.ಎಂ.ಸಿ. ಗುರು ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವಿವಿ ಪ್ರಸಾರಾಂಗ ನಿರ್ದೇಶಕ ಡಾ. ಶಿವಕುಮಾರ್ ಕಣಸೋಗಿ, ಸ್ನಾತಕ ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಡಾ. ಜೋಗಿಮಟ್ಟಿ ಮಂಜುನಾಥ, ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಕಾರ್ಯದರ್ಶಿ ಡಾ. ಎಸ್.ಆರ್.ಅಂಜಿನಪ್ಪ, ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಡಾ. ಕೆ.ಷಣ್ಮುಖ ಇದ್ದರು. ಉಪನ್ಯಾಸಕ ಸಿ. ಅಣ್ಣೇಶ್ ಸ್ವಾಗತಿಸಿದರು.