ದಾವಣಗೆರೆ : ಸಾಹಿತ್ಯವು ಸಹೃದಯರ ಜತೆಗೆ ಸೃಜನಾತ್ಮಕತೆ ಬೆಳೆಸುವ ಶಕ್ತಿ ಹೊಂದಿದೆ ಎಂದು ಭದ್ರಾವತಿಯ ಎಮೆರಿಟಿಸ್ ಪ್ರಾಧ್ಯಾಪಕಿ ಡಾ.ವಿಜಯಾದೇವಿ ಹೇಳಿದರು.
ನಗರದ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃತಿಗಳ ಬಿಡುಗಡೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ‘ಹೆತ್ತವರು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಆದಿಕವಿ ಪಂಪನಿಂದ ಹಿಡಿದು ಈವರೆಗಿನ ಸಾಹಿತ್ಯವು ಸೃಜನಾತ್ಮಕ ಕೃತಿಗಳ ಮೂಲಕ ಸಮಾಜಕ್ಕೆ ಉತ್ತಮ ಮೌಲ್ಯ ನೀಡುತ್ತ ಬಂದಿದೆ. ಸಹೃದಯರ ನಿರ್ಮಾಣದಿಂದ ಸಮಾಜ ಶಾಂತಮಯವಾಗಿರುತ್ತದೆ ಎಂದು ತಿಳಿಸಿದರು.
ಯಾವುದೇ ಕೃತಿ ಓದುಗರಿಗೆ ಆನಂದ ನೀಡಬೇಕು. ಹೆತ್ತವರು ಪುಸ್ತಕ ಪರಮಾನಂದ ನೀಡುತ್ತದೆ. ಜಾನಪದದಿಂದ ಹಿಡಿದು ಸಾಹಿತ್ಯ ಕ್ಷೇತ್ರದಲ್ಲಿ ತಾಯಿಯ ಕುರಿತಾದ ಕೃತಿಗಳೇ ಹೆಚ್ಚಾಗಿವೆ. 140ಕ್ಕೂ ಹೆಚ್ಚು ಲೇಖಕರು ಬರೆದಿರುವ ‘ಹೆತ್ತವರು’ ಕೃತಿ ಕುತೂಹಲ ಹಾಗೂ ಆಸಕ್ತಿ ಮೂಡಿಸುತ್ತದೆ ಎಂದರು.
ಹೆತ್ತವರು ಕೌಟುಂಬಿಕ ವ್ಯವಸ್ಥೆಯ ಶಾಶ್ವತ ಮೌಲ್ಯಗಳು. ಮೌಲ್ಯಾಧಾರಿತ ಜೀವನದ ಮೊದಲ ಮೆಟ್ಟಿಲುಗಳಾಗಿದ್ದು, ಸಮಾಜದಲ್ಲಿ ಬದುಕುವ ಶಕ್ತಿ ಮತ್ತು ಸಾಮರ್ಥ್ಯ ಧಾರೆ ಎರೆಯುವವರಾಗಿದ್ದಾರೆ. ಕೌಟುಂಬಿಕ ಸಂಸ್ಕೃತಿಗೆ ತಂದೆ-ತಾಯಿ ಅಡಿಪಾಯವಾಗಿದ್ದು, ಮಗುವಿನ ರಚನಾತ್ಮಕ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು.
ಚುಟುಕು ಸಾಹಿತ್ಯ ಪರಿಷತ್‌ನ ಸಂಸ್ಥಾಪಕ ಡಾ.ಎಂ.ಜಿ.ಆರ್. ಅರಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು. ಆದರೆ, ಹೆತ್ತವರನ್ನು ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ. ಹೆತ್ತವರ ಒಳ ಹೂರಣವನ್ನು ಲೇಖಕರು ಅತ್ಯಂತ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಚುಸಾಪ ಗೌರವ ಕಾರ್ಯದರ್ಶಿ ಕೆ.ಎಸ್. ವೀರಭದ್ರಪ್ಪ ತೆಲಗಿ ‘ಅಂತರಂಗದ ಧ್ವನಿ’ ಪುಸ್ತಕ ಕುರಿತು ಮಾತನಾಡಿದರು. ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಜಿ.ಎಚ್. ರಾಜಶೇಖರ್ ಗುಂಡಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚುಸಾಪ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಾ ಹಾಲಪ್ಪಗೌಡರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಹಿರಿಯ ಸಾಹಿತಿ ಎಸ್. ಮಲ್ಲಿಕಾರ್ಜುನಪ್ಪ, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಚುಸಾಪ ಗೌರವಾಧ್ಯಕ್ಷ ಶಿವಯೋಗಿ ಹಿರೇಮಠ್, ಸ್ಫೂರ್ತಿ ಪ್ರಕಾಶನ ಅಧ್ಯಕ್ಷ ಎಂ. ಬಸವರಾಜ್ ಇದ್ದರು.
ಇದೇ ಸಂದರ್ಭದಲ್ಲಿ ಆದರ್ಶ ಮಾತಾಪಿತರ ಪಾದಪೂಜೆ ನಡೆಯಿತು. ಹಿರಿಯ ಸಾಹಿತಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕರ್ನಾಟಕ ವಚನ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಸ್ಫೂರ್ತಿ ಪ್ರಕಾಶನ ತೆಲಿಗಿ ಮತ್ತು ನಿರ್ವರ್ಣ ಆರ್ಟ್ ಗ್ಯಾಲರಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಕಾಶ್ ಬೂಸ್ನೂರು ಸ್ವಾಗತಿಸಿದರು. ಸುನೀತಾ ಪ್ರಕಾಶ್ ನಿರೂಪಿಸಿದರು.