ದಾವಣಗೆರೆ : ಡಾ. ಎಚ್.ಎಫ್. ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನದಿಂದ ಪುಸ್ತಕ ಪಂಚಮಿ 16ನೇ ವಾರ್ಷಿಕೋತ್ಸವ ಸಮಾರಂಭ ನಗರದ ಈಶ್ವರಮ್ಮ ಪ್ರೌಢಶಾಲೆಯಲ್ಲಿ ಬುಧವಾರ ಮಧ್ಯಾಹ್ನ 2.30ಕ್ಕೆ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರೇರಕ ಡಾ.ಸಿ.ಆರ್. ಬಾಣಾಪುರಮಠ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭದಲ್ಲಿ ಪುಸ್ತಕ ವಾಚನ ಸಹಾಯ ಯೋಜನೆಯ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಕಳೆದ ವರ್ಷ 22 ಶಾಲೆಗಳ 58 ಫಲಾನುಭವಿಗಳಿಗೆ ಪುಸ್ತಕಗಳನ್ನು ವಿತರಿಸಲಾಗಿತ್ತು. ಈ ಬಾರಿ 25 ಶಾಲೆಗಳ ಬಡ, ಪ್ರತಿಭಾವಂತ ಹಾಗೂ ಉತ್ತಮ ಹಾಜರಾತಿಯ 65 ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. ಇದರ ಜತೆಗೆ ದಾವಣಗೆರೆ ಘಟಕದ ದಾನಿಗಳಿಂದ 20 ಶಾಲೆಗಳ 36 ವಿದ್ಯಾರ್ಥಿಗಳಿಗೆ ಸೇರಿದಂತೆ ಒಟ್ಟು 101 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಶಬ್ದಕೋಶ, ವ್ಯಾಕರಣ, ಅಟ್ಲಾಸ್, ಪ್ರಬಂಧ, ಪತ್ರಲೇಖನ ಇತ್ಯಾದಿ ಪಠ್ಯಪೂರಕ ವಿಷಯಗಳನ್ನು ಒಳಗೊಂಡ 600 ರೂ. ಮೌಲ್ಯದ ಪುಸ್ತಕಗಳನ್ನು ಪ್ರತಿ ವಿದ್ಯಾರ್ಥಿಗೆ ನೀಡಲಾಗುವುದು ಎಂದರು. ಕವಿ, ವಿಜ್ಞಾನಿ, ಸಮಾಜ ಸುಧಾರಕರು, ಪ್ರಖ್ಯಾತ ವ್ಯಕ್ತಿಗಳ ಪರಿಚಯ ಪುಸ್ತಕಗಳು, ಐತಿಹಾಸಿಕ, ಪೌರಾಣಿಕ, ಕಲೆ, ವಿಜ್ಞಾನ, ಸಾಹಿತ್ಯ, ಕ್ರೀಡೆ ಮುಂತಾದ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು, ಓದಿಗೆ ಪೂರಕವಾದ ನೋಟ್‌ಬುಕ್, ಪೆನ್, ಪೆನ್ಸಿಲ್, ಜಾಮಿಟ್ರಿ ಪೆಟ್ಟಿಗೆ ವಿತರಿಸಲಾಗುವುದು ಎಂದು ತಿಳಿಸಿದರು. ಪ್ರತಿಷ್ಠಾನದ ಸಂಚಾಲಕ ಪ್ರಕಾಶ್ ಬೂಸ್ನೂರ್, ನಿರಂಜನ್, ಪಿ.ಎಂ. ಶಿವಕುಮಾರ್, ಪ್ರಭುಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.