ದಾವಣಗೆರೆ : ಸಾಧಕರಾಗಲು ಅದ್ಭುತಗಳನ್ನೇನೂ ಮಾಡಬೇಕಿಲ್ಲ. ಮಹಿಳೆಯರು ಸಂಸಾರದಲ್ಲಿ ಸಾಮರಸ್ಯದಿಂದ ಇರುವುದು ಕೂಡ ಸಾಧನೆಯಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ವನಮಾಲಾ ಸಂಪನ್ನ ಕುಮಾರ್ ಹೇಳಿದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಆಯೋಜಿಸಿದ್ದ, ವೀಣಾ ಕೃಷ್ಣಮೂರ್ತಿ ಅವರ 2ನೇ ಕೃತಿ ದಿನ ಚುಟುಕು-ಭಾಗ 2 ಮತ್ತು 8ನೇ ಕೃತಿ ಸ್ವಾತಿ ಮುತ್ತುಗಳು, ದೇವನಗರಿ ಜಿಲ್ಲೆಯ ಸಾಧಕ ಮಹಿಳೆಯರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಏನೇ ಸಾಧನೆ ಮಾಡಿದರೂ ಕುಟುಂಬದ ಜವಾಬ್ದಾರಿಗಳನ್ನು ಮರೆಯಬಾರದು. ಕೌಟುಂಬಿಕ ವ್ಯವಸ್ಥೆಯಲ್ಲಿ ಇದ್ದುಕೊಂಡೇ ಸಾಧನೆ ಮಾಡಿದರೆ ಅದಕ್ಕೊಂದು ಮನ್ನಣೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ನಾವು ಏನೇ ಸಾಧನೆ ಮಾಡಿದರೂ ಕೌಟುಂಬಿಕ ಜವಾಬ್ದಾರಿಗಳನ್ನು ಮಾತ್ರ ಮರೆಯಬಾರದು. ಸಂಸಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ನಂತರ ಸಾಮಾಜಿಕ ಕೆಲಸಗಳನ್ನು ಮಾಡಬೇಕು. ಆಗ ಸಾಂಸಾರಿಕ ಜೀವನ ಚೆನ್ನಾಗಿರುತ್ತದೆ, ಉತ್ತಮ ಕೆಲಸ ಮಾಡಲು ಗೌರವ ಸಿಗುತ್ತದೆ ಎಂದು ತಿಳಿಸಿದರು. ಮಾಜಿ ಸಚಿವೆ ದಿ.ನಾಗಮ್ಮ ಕೇಶವಮೂರ್ತಿ ಅವರು ರಾಜಕಾರಣಿಯಾಗಿ, ಸಮಾಜ ಸೇವಕಿಯಾಗಿ ಮಾಡಿದ ಸಾಧನೆ ಅಪರೂಪವಾದುದು. ಅವರು ವನಿತಾ ಸಮಾಜ ಸೇರಿ ವಿವಿಧ ಸಂಘಗಳ ಮೂಲಕ ಅನೇಕ ಮಹಿಳೆಯರ ಬಾಳನ್ನು ಬೆಳಕಾಗಿಸಿದ್ದಾರೆ. ಟಿ. ಗಿರಿಜಾ ಸೇರಿ ಅನೇಕ ಮಹಿಳೆಯರು ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ವಹಿಸಿದ್ದರು. ಲೇಖಕಿ ವೀಣಾ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕಿ ಮಂಜುಳಾ ಮಂಜಪ್ಪ ನಿರೂಪಿಸಿದರು. ಎಸ್.ಎಂ. ಮಲ್ಲಮ್ಮ ಇದ್ದರು. ಅನಿತಾ ದೊಡ್ಡ ಗೌಡರ್ ಸ್ವಾಗತಿಸಿದರು.