ದಾವಣಗೆರೆ : ಎಪ್ಪತ್ತರ ದಶಕದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಪ್ರಜಾತಂತ್ರಕ್ಕೆ ಲಕ್ವ ಹೊಡೆಯಿತು ಎಂದು ಆರ್‌ಎಸ್‌ಎಸ್ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು. ಅಖಿಲ ಭಾರತ ಸಾಹಿತ್ಯ ಪರಿಷದ್‌ನಿಂದ ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಆಯೋಜಿಸಿದ್ದ, ಕರಾಳ ತುರ್ತು ಪರಿಸ್ಥಿತಿ ಕುರಿತಾದ ‘ಭುಗಿಲು’ ಮರುಮುದ್ರಿತ ಪುಸ್ತಕದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನದ ದುರುಪಯೋಗ ಮಾಡಿಕೊಂಡರು. ಈ ಬೆಳವಣಿಗೆಯು ನಮ್ಮ ದೇಶದ ಇತಿಹಾಸದಲ್ಲಿ ದುರ್ದೈವದ ಸಂಗತಿ ಎಂದು ತಿಳಿಸಿದರು. ಎಮರ್ಜೆನ್ಸಿ ವಿರುದ್ಧ ಆಗ ಒಂದು ಕಡೆ ಭೂಗತ ಹೋರಾಟಗಳು ಜತೆಗೆ ಗೋಚರವಾಗುವ ಹೋರಾಟಗಳೂ ನಡೆದವು. ಅದರ ಫಲವಾಗಿ 21 ತಿಂಗಳ ನಂತರ ಪ್ರಜಾತಂತ್ರ ಮರುಸ್ಥಾಪನೆ ಆಯಿತು ಎಂದು ವಿವರಿಸಿದರು. 1971 ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರು ಬಹುಮತದೊಂದಿಗೆ ಅಧಿಕಾರಕ್ಕೆ ಬಂದರು. ಅದಾದ ನಂತರ ನ್ಯಾಯಾಲಯದಿಂದ ಹೊರಬಿದ್ದ ತೀರ್ಪು ಇಂದಿರಾ ಗಾಂಧಿ ಅವರಿಗೆ ವಿರುದ್ಧವಾಗಿತ್ತು. ಆ ನಂತರದಲ್ಲಿ ತಮ್ಮ ವಿರುದ್ಧವಾಗಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ತುರ್ತು ಪರಿಸ್ಥಿತಿ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಿದರು ಎಂದರು. ತುರ್ತು ಪರಿಸ್ಥಿತಿಯ ದುಷ್ಪರಿಣಾಮವಾಗಿ ಮೂಲಭೂತ ಹಕ್ಕುಗಳು ಮೊಟಕುಗೊಂಡವು. ಅಭಿವ್ಯಕ್ತಿ ಸ್ವಾತಂತ್ರೃ ಇಲ್ಲದಾಯಿತು. ಅಂದಿನ ನಿಯಮಗಳನ್ನು ಉಲ್ಲಂಘಿಸಿದವರು ಶಿಕ್ಷೆಗೆ ಗುರಿಯಾದರು, ಜೈಲಿನಲ್ಲಿ ನರಕಯಾತನೆ ಅನುಭವಿಸಿದರು. ಸಂಘದ ಕಾರ್ಯಕರ್ತರಿಗೆ ತೊಂದರೆ ಕೊಡಲಾಯಿತು ಎಂದು ಹೇಳಿದರು. ವಿಭಾಗ ಸಂಯೋಜಕ ಹರ್ಷ, ಗು. ರುದ್ರಯ್ಯ, ಪರಿಷತ್ತಿನ ಜಿಲ್ಲಾಧ್ಯಕ್ಷ ಲಲಿತ್‌ಕುಮಾರ್ ಜೈನ್ ಇದ್ದರು. ಅಂಬರೀಶ್ ನಿರೂಪಿಸಿದರು. ಕಾಶೀನಾಥ್ ಸ್ವಾಗತಿಸಿದರು. ಮಾನಸ ಪ್ರಾರ್ಥಿಸಿದರು. ... (ಬಾಕ್ಸ್) ಹಿಂಸೆ, ಮಾನಸಿಕ ನೋವು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಕಾರ್ಯಕರ್ತ ಎಂ.ಜಿ. ಶ್ರೀನಿವಾಸರಾವ್ ಅಂದಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಂಘದ ಸ್ವಯಂಸೇವಕನಾಗಿದ್ದ ನನಗೆ ದೇಶವೇ ಮುಖ್ಯವಾಗಿತ್ತು. ಆಗ ನಾನು ಬ್ಯಾಂಕ್, ಎಲ್‌ಐಸಿ ಕಚೇರಿ ಇನ್ನಿತರ ಕಡೆಗಳಲ್ಲಿ ಕರಪತ್ರಗಳನ್ನು ಹಂಚಿದೆ. ಪೊಲೀಸರು ನನ್ನನ್ನು ಬಂಧಿಸಿ ಕರೆದೊಯ್ದರು. ಜೈಲಿಗೆ ಹಾಕಿದರು. ಊಟವಿಲ್ಲದಂತೆ ದಿನಗಳನ್ನು ಕಳೆಯಬೇಕಾಯಿತು. ಬಹಳ ಹಿಂಸೆ, ಮಾನಸಿಕವಾಗಿ ನೋವು ಅನುಭವಿಸಿದೆ ಎಂದು ತಿಳಿಸಿದರು. ವಿನಾಯಕ ರಾನಡೆ ಪ್ರಾಸ್ತಾವಿಕವಾಗಿ ಮಾತನಾಡಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದ ಹೋರಾಟವು 2ನೇ ಸ್ವಾತಂತ್ರೃ ಸಂಗ್ರಾಮವಾಗಿತ್ತು ಎಂದು ಅಭಿಪ್ರಾಯಪಟ್ಟರು. ‘ಭುಗಿಲು’ ಪುಸ್ತಕವನ್ನು ಎಲ್ಲರೂ ಓದಬೇಕು. ವಿಶೇಷವಾಗಿ ಇಂದಿನ ಯುವಜನರು ಇತಿಹಾಸದ ಬಗ್ಗೆ ತಿಳದುಕೊಳ್ಳಬೇಕು ಎಂದರು.