ದಾವಣಗೆರೆ : ಬದಲಾದ ಕಾಲಘಟ್ಟದಲ್ಲಿ ಇನ್ನೊಬ್ಬರ ಮೇಲೆ ಅವಲಂಬನೆಯಾಗದೇ, ಕಾನೂನಿನ ಚೌಕಟ್ಟಿನಲ್ಲಿ ವಿವಿಧ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಜೀತ ಪದ್ಧತಿಯ ನಿರ್ಮೂಲನೆ ಮಾಡಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿ.ಪಂ, ಪೊಲೀಸ್, ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಮುಕ್ತಿ ಅಲಯನ್ಸ್ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ, ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಜಾಥಾ ಹಾಗೂ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಯೋಜನೆಗಳಿಂದ ಬಡವರೂ ಸಹ ಬದುಕನ್ನು ಕಟ್ಟಿಕೊಂಡಿದ್ದಾರೆ. ಜೀತ ಪದ್ಧತಿ ನಿರ್ಮೂಲನೆಗೂ ಇವು ಸಹಕಾರಿಯಾಗಿವೆ. ಹಿಂದಿನ ದಿನಮಾನದಲ್ಲಿ ಶ್ರೀಮಂತರಿಂದ ನೆರವು ಪಡೆದು ಹಣ ತೀರುವಳಿಗೆ ಕೆಲಸ ಮಾಡುವ ಪದ್ಧತಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಂದ ಬಡವರ ಸ್ಥಿತಿ ಸುಧಾರಿಸಿದೆ ಎಂದರು. ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ, ಉಚಿತ ಆರೋಗ್ಯ ವಿಮೆ, ಮುಂತಾದ ಸೌಲಭ್ಯಗಳನ್ನು ಜನರು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀತ ಪದ್ಧತಿ ಕಂಡುಬಂದಿಲ್ಲ. ಒಂದು ವೇಳೆ ಕಂಡು ಬಂದರೆ ಅಂಥ ಕಾರ್ಮಿಕರಿಗೆ ವಸತಿ ಕಲ್ಪಿಸುವುದು, ಸ್ವ ಉದ್ಯೋಗಕ್ಕಾಗಿ ಕೌಶಲ ತರಬೇತಿ, ವಿದ್ಯಾಭ್ಯಾಸ, ಉದ್ಯೋಗ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಮೂಲಕ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಜೀತ ಪದ್ಧತಿ ನಿರ್ಮೂಲನಾ ಸಮಿತಿ ರಚನೆ ಮಾಡಲಾಗಿದೆ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ನ್ಯಾಯಾಧೀಶರು ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಜೀತಪದ್ಧತಿ ಕುರಿತು ಬರುವ ದೂರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವುದು ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ ಕುಮಾರ್, ಹೆಚ್ಚುವರಿ ಎಸ್ಪಿ ಮಂಜುನಾಥ್, ಜಿ.ಪಂ. ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಬಿ. ಮಲ್ಲನಾಯ್ಕ, ಯೋಜನಾ ನಿರ್ದೇಶಕಿ ರೇಷ್ಮ ಕೌಸರ್, ಮುಕ್ತಿ ಅಲಯನ್ಸ್ ಸಂಚಾಲಕಿ ಬೃಂದಾ ಅಡಿಗ, ಕ್ರಿಸ್ಟೋಫರ್ ಸ್ಪ್ಯಾನಿ, ರಾಜೇಂದ್ರನ್, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.