ಜಿಲ್ಲೆ

ರಕ್ತದಾನ ಮಾಡಿ, ಜೀವ ಕಾಪಾಡಿ

ರಮೇಶ ಜಹಗೀರದಾರ್

ಹೊನ್ನಾಳಿ : ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಅಸಾಧ್ಯವಾದ್ದರಿಂದ ಇನ್ನೊಬ್ಬರ ಜೀವ ಉಳಿಸುವುದಕ್ಕೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ. ಧನಂಜಯ್ ಹೇಳಿದರು.  ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜೆಜೆ ಮೆಡಿಕಲ್ ಕಾಲೇಜು, ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಹಾಗೂ ರೇಂಜರ್ಸ್ ಘಟಕ ಮತ್ತು ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.  ಪ್ರಕೃತಿದತ್ತವಾಗಿ ಮನುಷ್ಯರಲ್ಲಿ ರಕ್ತ ಉತ್ಪತ್ತಿಯಾಗುತ್ತದೆ. ಆರೋಗ್ಯವಂತ ಹಾಗೂ ಸದೃಢ ದೇಹ ಹೊಂದಿರುವ ಎಲ್ಲರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. ಇದರಿಂದ ಅನಾರೋಗ್ಯ ಪೀಡಿತ ವ್ಯಕ್ತಿಯ ಜೀವ ಉಳಿಸಬಹುದು. ರಕ್ತದಾನ ಮಾಡಿದ ವ್ಯಕ್ತಿಯ ಆರೋಗ್ಯವೂ ಸದೃಢವಾಗುತ್ತದೆ.  ಆದರೆ ಇತ್ತೀಚೆಗೆ ಯುವಕರು ರಕ್ತದಾನ ಮಾಡಲು ಮುಂದೆ ಬರುತ್ತಿಲ್ಲ. ರಕ್ತದಾನ ಮಾಡಿದರೆ ಅನಾರೋಗ್ಯ ಪೀಡಿತರಾಗುತ್ತಾರೆಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು ಎಂದರು.  ಅಪಘಾತ ಹಾಗೂ ಇನ್ನಿತರ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತ ಸಾವು, ಬದುಕಿನ ಮಧ್ಯ ಹೋರಾಟ ಮಾಡುತ್ತಿರುವ ವ್ಯಕ್ತಿಗೆ ರಕ್ತದಾನ ಮಾಡಿ ಜೀವ ಕಾಪಾಡಿದರೆ ಆ ವ್ಯಕ್ತಿಗೆ ನೀವೇ ದೇವರಾಗಿರುತ್ತೀರಿ ಎಂದರು.  ಜೆಜೆಎಂ ಮೆಡಿಕಲ್ ಕಾಲೇಜಿನ ಡಾ. ಶೀನಾ ಮಾತನಾಡಿ, ಆರೋಗ್ಯವಂತ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇತ್ತೀಚೆಗೆ ಹೆಣ್ಣು ಮಕ್ಕಳು ಕೂಡಾ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ತಿಳಿಸಿದರು.  ಹಿರಿಯ ಪತ್ರಕರ್ತ ಎನ್.ಕೆ. ಆಂಜನೇಯ 25ನೇ ಬಾರಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ನಾವು ಕೊಡುವ ಸ್ವಲ್ಪ ರಕ್ತ ಮತ್ತೊಬ್ಬರ ಪ್ರಾಣ ಉಳಿಸುತ್ತದೆ ಎಂದರೆ ಅದಕ್ಕಿಂತ ಪುಣ್ಯದ ಕಾರ್ಯ ಮತ್ತೊಂದಿಲ್ಲ ಎಂದರು.  ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ನಾಗರಾಜ್‌ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರು, ಪತ್ರಕರ್ತರು ಹಾಗೂ ವಿದ್ಯಾರ್ಥಿಗಳು ಸೇರಿ ಒಟ್ಟು 51 ಜನರು ರಕ್ತದಾನ ಮಾಡಿದರು.  ಆಪ್ತ ಸಮಾಲೋಚಕ ರಾಘವೇಂದ್ರ, ಭಾಗ್ಯಮ್ಮ, ಎಚ್‌ಡಿಎಫ್‌ಸಿ ಬ್ಯಾಂಕಿನ ಲಕ್ಷ್ಮೀಕಾಂತ್, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಹರಾಳು ಮಹಾಬಲೇಶ್ವರ, ಡಾ.ಶ್ರೀನಿವಾಸ್, ಕೆ.ಎಂ. ಗೀತಾ, ಡಾ. ಬೀನಾ ಇದ್ದರು.