ದಾವಣಗೆರೆ : ರಕ್ತದಾನದ ಕುರಿತು ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂದು ಹಿರಿಯ ಪತ್ರಕರ್ತ ಸಿದ್ದಯ್ಯ ಹಿರೇಮಠ ತಿಳಿಸಿದರು.
ಲೈಫ್‌ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದಿಂದ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಹಾಗೂ ಮಾತಾ ಅಮೃತಾನಂದಮಯಿ ಅವರ 70ನೇ ಜನ್ಮದಿನಾಚರಣೆ ಪ್ರಯುಕ್ತ ನಗರದ ಅಮೃತಾನಂದಮಯಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜನ್ಮದಿನ ಹಾಗೂ ಮದುವೆ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ರಕ್ತದಾನದಂತಹ ಸಮಾಜಮುಖಿ ಕಾರ್ಯ ನಡೆಸಲು ಪ್ರೇರೇಪಿಸಬೇಕು. ಯುವಜನರಲ್ಲಿ ಅರಿವು ಮೂಡಿಸುವ ಕೆಲಸ ನಿರಂತರ ನಡೆಯಬೇಕು ಎಂದು ಆಶಿಸಿದರು.
ಲೈಫ್‌ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹದ ಉಪಾಧ್ಯಕ್ಷ ಪೃಥ್ವಿರಾಜ ಬಾದಾಮಿ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಯುವಜನತೆ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
ಸಮೂಹದ ಕಾರ್ಯದರ್ಶಿ ಅನಿಲ್ ಬಾರೆಂಗಳ್ ಮಾತನಾಡಿ, 1987ರಲ್ಲಿ ಕೇವಲ ಬೆರಳೆಣಿಕೆಯಷ್ಟು ಯುವಕರಿಂದ ಆರಂಭವಾದ ಸಂಸ್ಥೆಯಲ್ಲಿ ಈಗ 3 ಸಾವಿರಕ್ಕೂ ಅಧಿಕ ಜನರು ಸದಸ್ಯತ್ವ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಸದಸ್ಯರು ಸ್ವಯಂ ರಕ್ತದಾನ ಮಾಡುವ ಜತೆಗೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿರಂತರ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಾಪೂಜಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಜಗದೀಶ್ವರಿ ರಕ್ತದಾನ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಚಾರ್ಯೆ ಪ್ರತಿಭಾ, ಉಪ ಪ್ರಾಚಾರ್ಯ ಪ್ರತೀಕ್, ಆಡಳಿತಾಧಿಕಾರಿ ನಂದೀಶ, ಲೈಫ್‌ಲೈನ್ ಸಂಸ್ಥೆಯ ಗಾಯಕವಾಡ್ ಸಂತೋಷ್, ನಟರಾಜ, ಮಾಧವ ಪದಕಿ, ಗೋಪಾಲಕೃಷ್ಣ, ಮಾಧವಿ ಗೋಪಾಲಕೃಷ್ಣ, ರಾಜು ಭಂಡಾರಿ, ಡಾ.ಗೋವರ್ಧನ್, ಐಶ್ವರ್ಯ, ದೀನಾಮಣಿ, ದುರ್ಗಪ್ಪ ಇದ್ದರು. ವಿದ್ಯಾಸಂಸ್ಥೆಯ ಉಪನ್ಯಾಸಕರು ಹಾಗೂ ಶಿಕ್ಷಕರು ರಕ್ತದಾನ ಮಾಡಿದರು.