ಜಿಲ್ಲೆ

ಉಚ್ಚಾಟನೆ ಹಿಂದೆ ಜಿಲ್ಲಾ ಮಟ್ಟದ ಕೆಲವರ ಸಂಚು

ರಮೇಶ ಜಹಗೀರದಾರ್

ದಾವಣಗೆರೆ : ಅಧಿಕೃತ ನೋಟಿಸ್ ನೀಡದೆ, ಮೌಖಿಕ ಅಥವಾ ಲಿಖಿತವಾಗಿ ಸ್ಪಷ್ಟನೆ ಪಡೆಯದೆ ನಮ್ಮನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಜಗಳೂರು ಕ್ಷೇತ್ರದ ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಹೇಳಿದ್ದಾರೆ.
 ಈ ಬಗ್ಗೆ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರು ಸೇರಿ ಹಿರಿಯರಿಗೆ ಮಾಹಿತಿ ಇಲ್ಲದೆ ಜಿಲ್ಲಾ ಮಟ್ಟದ ಕೆಲವರಿಂದ ಈ ಸಂಚು ನಡೆದಿರುವುದಾಗಿ ಅಧಿಕೃತವಾಗಿ ತಿಳಿದು ಬಂದಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಹಾಲಿ ಮತ್ತು ಮಾಜಿ ಶಾಸಕರನ್ನು ಉಚ್ಚಾಟನೆ ಮಾಡಲು ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ಯಾವುದೇ ಅಧಿಕಾರ ಇಲ್ಲ. ಆದರೂ ಈ ಷಡ್ಯಂತ್ರಕ್ಕೆ ಕಾರಣ ಬೇರೆ ಇದೆ ಎಂದಿದ್ದಾರೆ.
 ದಾವಣಗೆರೆ ಲೋಕಸಭಾ ಚುನಾವಣೆಗೆ ನನ್ನ ಪುತ್ರ ಡಾ. ಟಿ.ಜಿ.ರವಿಕುಮಾರ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರನ್ನು ಸ್ಫರ್ಧೆಯಿಂದ ಹತ್ತಿಕ್ಕಲು ಜಿಲ್ಲೆಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
 ನಮಗೆ ಅಪಮಾನ ಮಾಡಲೆಂದೇ ಹೀಗೆ ಮಾಡಿದ್ದಾರೆ. ಆದರೆ ತಾಯಿ ಸಮಾನವಾದ ಪಕ್ಷಕ್ಕೆ ನಾವು ಎಂದಿಗೂ ಮುಜುಗರ ತರುವುದಿಲ್ಲ. ಹಣ, ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿ ಬಂದವರಿಗೆ, ಅಂತಹವರನ್ನು ಪೋಷಿಸುವವರಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
 ಗುರುಸಿದ್ಧನಗೌಡ ಅವರ ಪುತ್ರ ಡಾ. ಟಿ.ಜಿ.ರವಿಕುಮಾರ್ ಈ ಕುರಿತು ಹೇಳಿಕೆ ನೀಡಿದ್ದು, ತಾವು ದಾವಣಗೆರೆ ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಜಿಲ್ಲೆಯಾದ್ಯಂತ ನನ್ನ ಪರವಾಗಿ ಬೆಂಬಲ ಮೂಡುತ್ತಿರುವ ಕಾರಣ ಸ್ವಹಿತಾಸಕ್ತಿ ಹೊಂದಿದ ಜಿಲ್ಲಾ ಮಟ್ಟದ ಕೆಲವರು ಉಚ್ಚಾಟನೆಯ ವ್ಯರ್ಥ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ.