ದಾವಣಗೆರೆ : ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ’ ಯಶಸ್ವಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ ರಾಮ್ ಆ್ಯಂಡ್ ಕೋ ವೃತ್ತದ ವಿನಾಯಕ ದೇವಸ್ಥಾನದಲ್ಲಿ ಭಾರತದ ಧ್ವಜವನ್ನಿಟ್ಟು ವಿಶೇಷ ಪೂಜೆ ಸಲ್ಲಿಸಿದರು. ಆ ಮೂಲಕ ಸೇನೆ ಜತೆ ನಾವಿದ್ದೇವೆ, ಅವರಿಗೆ ಎಲ್ಲ ಶಕ್ತಿ ಸಿಗಲಿ, ಅವರ ಜೀವಕ್ಕೆ ಹಾನಿಯಾಗದಿರಲಿ ಎಂದು ಪ್ರಾರ್ಥಿಸಿದರು. ‘ನಮ್ಮ ಸೈನಿಕರ ಆತ್ಮಶಕ್ತಿ ಹೆಚ್ಚಿಸು, ಅವರ ಜೀವಗಳ ಕಾಪಾಡು’ ಎಂದು ಭಕ್ತಿಯಿಂದ ದೇವರ ಮೊರೆ ಹೋದರು. ನಾಗರಿಕರಿಗೆ ತೊಂದರೆ ಮಾಡದೇ ಅಡಗು ತಾಣಗಳಿಗೆ ನಿಖರ ಗುರಿಯಿಟ್ಟು ಉಗ್ರರ ಸದೆಬಡಿದ ಸೈನಿಕರಿಗೆ ಜಯವಾಗಲಿ, ಪಾಕಿಸ್ತಾನ ಪುಡಿ, ಪುಡಿ ಎಂದು ಘೋಷಣೆ ಕೂಗಿದರು. ಪೂಜೆ ಮುಗಿಸಿದ ನಂತರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮಾಜಿ ಸೈನಿಕರು ಮತ್ತು ನಾಗರಿಕರು, ಭಾರತೀಯ ಮಿಲಿಟರಿ ಪಡೆಗೆ ಜೈಕಾರ ಕೂಗಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮಾತನಾಡಿ, ನಮ್ಮ ಮಿಲಿಟರಿ ಪಡೆ ಯಾವ ನಾಗರಿಕರಿಗೂ ತೊಂದರೆ ಮಾಡದೇ ನಿಖರ ಗುರಿಯಿಟ್ಟು ಉಗ್ರರನ್ನು ಸೆದೆಬಡಿದಿದೆ. ಭಾರತದ ತಂಟೆಗೆ ಬಂದರೆ ಏನಾಗಲಿದೆ ಎಂಬುದನ್ನು ನಮ್ಮ ಸೈನಿಕರು ತೋರಿಸಿದ್ದಾರೆ. ಅಂತಹ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ಮತ್ತು ಅವರ ಜೀವಗಳ ರಕ್ಷಣೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಸೈನಿಕರ ಜತೆ ನಾವು ಇದ್ದೇವೆ, ಅಮಾಯಕ ನಾಗರಿಕರನ್ನು ಬಲಿ ಪಡೆವ ಉಗ್ರರನ್ನು ನಾಶ ಮಾಡಬೇಕು ಎಂದರು. ಮುಖಂಡರಾದ ಲೋಕಿಕೆರೆ ನಾಗರಾಜ್, ಕೊಳೇನಹಳ್ಳಿ ಸತೀಶ್, ಅತೀಥ್ ಅಂಬರ್‌ಕರ್, ಶಿವನಹಳ್ಳಿ ರಮೇಶ್, ಪಿ.ಸಿ. ಶ್ರೀನಿವಾಸ್, ಗೌತಮ್ ಜೈನ್, ರಮೇಶ್ ನಾಯ್ಕ, ಜಯಮ್ಮ, ಮುಸ್ಲಿಂ ಮುಖಂಡರಾದ ಟಿಪ್ಪು ಸುಲ್ತಾನ್, ನಾಸಿರ್ ಅಹಮದ್ ಇತರರು ಪಾಲ್ಗೊಂಡಿದ್ದರು.