ಜಿಲ್ಲೆ

ಬಿ-ಖಾತಾ ಹೆಸರಿನಲ್ಲಿ ಬಡವರಿಗೆ ಅನ್ಯಾಯ

ರಮೇಶ ಜಹಗೀರದಾರ್

ದಾವಣಗೆರೆ :  ಬಿ-ಖಾತಾ ಅಭಿಯಾನದ ಹೆಸರಿನಲ್ಲಿ ರಾಜ್ಯ ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ಬಡವರಿಂದ ಹಣ ಲೂಟಿ ಮಾಡುತ್ತಿದೆ ಎಂದು ಮಹಾನಗರ ಪಾಲಿಕೆಯ ವಿಪಕ್ಷ ಮಾಜಿ ನಾಯಕ ಕೆ. ಪ್ರಸನ್ನ ಕುಮಾರ್ ದೂರಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಂದಾಯ ನಿವೇಶನ ಅಥವಾ ಕಟ್ಟಡಕ್ಕೆ ಬಿ-ಖಾತೆ ನೀಡಲಾಗುವುದು ಎಂದು ಸಾರ್ವಜನಿಕರಿಗೆ ದುಪ್ಪಟ್ಟು ತೆರಿಗೆ ವಿಧಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಹೇಳಿದರು.  ಕಂದಾಯ ನಿವೇಶನಗಳನ್ನು ಬಿ-ಖಾತಾ ರಿಜಿಸ್ಟರ್‌ನಲ್ಲಿ ನಮೂದಿಸಿ ನಮೂನೆ 2-ಎ ಅಥವಾ ನಮೂನೆ 2-ಸಿ ನೀಡಲಾಗುತ್ತಿದೆ. ಇದಕ್ಕಾಗಿಯೇ ದುಪ್ಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಬಿ-ಖಾತಾ ದೊರೆಯುವುದರಿಂದ ಅಕ್ರಮ-ಸಕ್ರಮ ಆಗುತ್ತದೆ. ಕಟ್ಟಡ ಪರವಾನಗಿ ದೊರೆಯುತ್ತದೆ. ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಬಿ-ಖಾತೆ ಪಡೆಯುತ್ತಿದ್ದಾರೆ. ಆದರೆ, ಸರ್ಕಾರ ಅನ್ಯಾಯ ಮಾಡುತ್ತಿರುವುದು ಜನರಿಗೆ ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.  ಬಿ-ಖಾತೆ ಮಾಡಿಸಿಕೊಂಡವರಿಗೆ ಸ್ವತ್ತಿನ ರಿಜಿಸ್ಟರ್‌ನಲ್ಲಿ ‘ಅನಧಿಕೃತ’ ಎಂದೇ ನಮೂದಿಸಲಾಗುತ್ತದೆ. ಇದರಿಂದಾಗಿ ಅಕ್ರಮ-ಸಕ್ರಮ ಆಗುವುದಿಲ್ಲ. ಕಟ್ಟಡ ಪರವಾನಗಿ ದೊರೆಯುವುದಿಲ್ಲ. ಸಾಲ ಸೌಲಭ್ಯ ಪಡೆಯಲು ಆಗುವುದಿಲ್ಲ. ಬಿ-ಖಾತೆ ಮಾಡಿಸಿಕೊಂಡವರು ಮಾತ್ರ ವರ್ಷವೂ ತೆರಿಗೆ ಕಟ್ಟಬೇಕಾಗುತ್ತದೆ ಎಂದರು.  ಬಿ-ಖಾತಾ ನೀಡಲು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಕೇವಲ ನೋಂದಾಯಿತ ಮಾರಾಟ ಪತ್ರ, ದಾನ, ವಿಭಾಗ ಪತ್ರ ಕೇಳಬೇಕು. ಆದರೆ, ನಗರ ಪಾಲಿಕೆಯಲ್ಲಿ ಇಲ್ಲಸಲ್ಲದ ದಾಖಲೆ ಕೇಳಿ 10-15 ಸಾವಿರ ರೂ. ವಸೂಲಿ ಮಾಡುವ ವಾತಾವರಣ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.  ರಾಜ್ಯಾದ್ಯಂತ ಬಿ-ಖಾತಾ ಅಭಿಯಾನ ನಿಲ್ಲಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ನಿಲ್ಲಿಸದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.  ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಬಿ-ಖಾತೆ ಪಡೆಯುವುದರಿಂದ ಯಾರಿಗೂ ನಯಾಪೈಸೆ ಅನುಕೂಲ ಇಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣದ ಹೊಂದಾಣಿಕೆಗಾಗಿಯೇ ಸರ್ಕಾರ ಬಿ-ಖಾತಾ ಅಭಿಯಾನಕ್ಕೆ ಮಹತ್ವ ನೀಡುತ್ತಿದೆ. ಸ್ವತಃ ಮುಖ್ಯಮಂತ್ರಿಯವರೇ ಉದ್ಘಾಟಿಸುವ ಮೂಲಕ ಅಬ್ಬರದ ಪ್ರಚಾರ ನೀಡಿದ್ದಾರೆ ಎಂದು ಹೇಳಿದರು.  ಮಹಾನಗರ ಪಾಲಿಕೆ ಮಾಜಿ ಸದಸ್ಯ ಆರ್. ಶಿವಾನಂದ್ ಮಾತನಾಡಿ, ಬಿ-ಖಾತೆ ನೀಡಲು ಮಹಾನಗರ ಪಾಲಿಕೆ 22ನೇ ವಾರ್ಡ್‌ನಲ್ಲಿ ಹಳೆಯ ನೀರಿನ ಬಿಲ್ ಹಾಗೂ ಇತರೆ ಬಾಕಿ ವಸೂಲಿ ಮಾಡಲಾಗುತ್ತಿದೆ. ಬಲವಂತವಾಗಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.  ಮುಖಂಡರಾದ ಸುರೇಶ್ ಗಂಡಗಾಳೆ, ಜಯಪ್ರಕಾಶ್, ಲಿಂಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.