ಜಿಲ್ಲೆ

ಹಲ್ಲೆ ಯತ್ನ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ : ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.  ಪಕ್ಷದ ಜಿಲ್ಲಾ ಕಚೇರಿಯಿಂದ ಉಪ ವಿಭಾಗಾಧಿಕಾರಿ ಕಚೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು, ಮುಖಂಡರು ಮನವಿ ಸಲ್ಲಿಸಿದರು.  ವಿಧಾನ ಮಂಡಲದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಮಾಜಿ ಸಚಿವ ಸಿ.ಟಿ. ರವಿ ಅವರ ಮೇಲೆ ಗೂಂಡಾ ವರ್ತನೆ, ದಬ್ಬಾಳಿಕೆ ನಡೆದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಖಾಸಗಿ ಆಪ್ತ ಸಹಾಯಕ ಸಂಗನಗೌಡ ಮತ್ತವರ ಬೆಂಬಲಿಗರಿಂದ ಸಿ.ಟಿ. ರವಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಯತ್ನ ನಡೆದಿದೆ. ಇದು ಅನಾಗರಿಕ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಅಧಿವೇಶನ ನಡೆಯುತ್ತಿರುವಾಗ ರೈತರು, ಮಹಿಳೆಯರು ಸೇರಿದಂತೆ ಜನ ಸಾಮಾನ್ಯರು ವಿಧಾನ ಸೌಧದೊಳಗೆ ಹೋಗಲು ಪ್ರವೇಶಾವಕಾಶ ಇರುವುದಿಲ್ಲ. ಹಾಗಿರುವಾಗ ರೌಡಿ ಪ್ರವೃತ್ತಿಯ ವ್ಯಕ್ತಿಗಳ ಗುಂಪು ವಿಧಾನಸೌಧದಲ್ಲಿ ಪ್ರವೇಶಿಸಿದೆ. ರಾಜ್ಯದಲ್ಲಿರುವುದು ಗೂಂಡಾ ಸರ್ಕಾರ ಎಂಬುದಕ್ಕೆ ಇದು ಬಲವಾದ ಪುರಾವೆಯಾಗಿದೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಇಲ್ಲವಾಗಿದೆ. ಶಾಸಕರಿಗೇ ಸೂಕ್ತ ಭದ್ರತೆ ಇಲ್ಲವಾದರೆ ಜನ ಸಾಮಾನ್ಯರ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.  ಸಿ.ಟಿ. ರವಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 75ರಡಿ ಲೈಂಗಿಕ ಕಿರುಕುಳ ಮತ್ತು ಕಲಂ 79ರಡಿ ಮಹಿಳೆಯರ ಮಾನಕ್ಕೆ ಕುಂದು ತರುವಂತಹ ಪದ ಬಳಕೆ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿರುವುದನ್ನು ರದ್ದುಪಡಿಸಬೇಕು. ರಾಜ್ಯ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.  ಪಕ್ಷದ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮಾಜಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಬಸವರಾಜ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ  ಧನಂಜಯ ಕಡ್ಲೆಬಾಳ, ಅಣ್ಣೇಶ್ ಐರಣಿ, ನಿಕಟಪೂರ್ವ ಅಧ್ಯಕ್ಷ ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಕಾರ್ಯದರ್ಶಿ ರಘುನಂದನ್, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಬಿ.ಟಿ. ಶ್ಯಾಮ, ಜಿಲ್ಲಾ ವಾಕ್ತಾರ ಕೊಳೇನಹಳ್ಳಿ ಸತೀಶ್ ಇದ್ದರು.  ಮಹಾನಗರ ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ್, ಶಿವಾನಂದ, ಶಿವಪ್ರಕಾಶ್, ಎಸ್.ಟಿ. ವೀರೇಶ್ ಇತರರು ಪಾಲ್ಗೊಂಡಿದ್ದರು.