ಜಿಲ್ಲೆ

ಭದ್ರಾ ನಾಲೆಗಳಿಗೆ ನೀರು ಹರಿಸಲು ಬಿಜೆಪಿ ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ : ಭದ್ರಾ ಜಲಾಶಯದಿಂದ ನಾಲೆಗಳಿಗೆ ತಕ್ಷಣವೇ ನೀರು ಹರಿಸಬೇಕು ಎಂದು ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.
 ಪಕ್ಷದ ಜಿಲ್ಲಾ ಮುಖಂಡರು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರಿಗೆ ಶನಿವಾರ ಈ ಕುರಿತು ಮನವಿ ಸಲ್ಲಿಸಿದರು.
 ಆಗಸ್ಟ್ ಮೊದಲ ವಾರದಲ್ಲಿಯೆ ಮುಂಗಾರು ಹಂಗಾಮಿನ ಭತ್ತದ ನಾಟಿ ಮಾಡಬೇಕು. ತಡವಾದರೆ ಹೂವಾಡುವ ಹಂತದಲ್ಲಿ ಮೂಡು ಗಾಳಿಯಿಂದ ಬೆಳೆ ಶೀತಕ್ಕೆ ಸಿಲುಕಿ ಇಳುವರಿ ಕುಂಠಿತವಾಗುತ್ತದೆ ಎಂದು ಕೃಷಿ ಇಲಾಖೆ ಜಿಲ್ಲೆಯ ರೈತರಿಗೆ ಸಲಹೆ ನೀಡಿದೆ ಎಂದು ತಿಳಿಸಿದರು.
 ಆದರೆ ಇದುವರೆಗೆ ಭದ್ರಾ ನೀರು ಹರಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಭದ್ರಾ ಅಚ್ಚುಕಟ್ಟು ಪ್ರದೇಶದ ಬಹುತೇಕ ರೈತರು ಬೇರೆ ಮೂಲಗಳಿಂದ ನೀರು ಬಳಸಿ, ಸಸಿಮಡಿ ಸಿದ್ಧಪಡಿಸಿಕೊಂಡು, ನಾಟಿ ಮಾಡುವ ಸಲುವಾಗಿ ನಾಲೆಗೆ ನೀರು ಹರಿಸುವುದನ್ನು ಕಾಯುತ್ತಿದ್ದಾರೆ ಎಂದು ಹೇಳಿದರು.
 ನಾಲೆಗಳಿಗೆ ನೀರು ಹರಿಸಿ ರೈತರ ನೆರವಿಗೆ ಧಾವಿಸಬೇಕು ಎಂದು 10 ದಿನಗಳಿಂದಲೂ ಬಿಜೆಪಿ ಮತ್ತು ರೈತರ ಸಂಘಟನೆಗಳು ಒತ್ತಾಯ ಮಾಡುತ್ತಿದ್ದರೂ ಜಿಲ್ಲಾಡಳಿತ ಕಣ್ಣು, ಕಿವಿ ಇಲ್ಲವೆಂಬಂತೆ ದಿವ್ಯ ಮೌನ ವಹಿಸಿದೆ. ರೈತಪರ ಕಾಳಜಿ ಇಲ್ಲ. ಆಗಸ್ಟ್ ಮೊದಲ ವಾರದಲ್ಲಿ ನೀರು ಬಿಡುವುದಾಗಿ ಹೇಳಿಕೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರಿಗೆ ಸೋಜಿಗ ತಂದಿದೆ ಎಂದು ತಿಳಿಸಿದರು.
 ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 164.5 ಅಡಿ ಇದ್ದು, 4011 ಕ್ಯೂಸೆಕ್ ಒಳಹರಿವು ಇದೆ. 47 ಟಿಎಂಸಿಯಷ್ಟು
 ನೀರಿನ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಮಳೆ ಬರುವ ಸಾಧ್ಯತೆಗಳಿವೆ. ಆದ್ದರಿಂದ ತಕ್ಷಣವೇ ನೀರು ಬಿಡುವ ನಿರ್ಧಾರ ಮಾಡಬೇಕು ಎಂದು ಆಗ್ರಹಿಸಿದರು.
 ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮುಖಂಡರಾದ ಕೊಳೇನಹಳ್ಳಿ ಬಿ.ಎಂ. ಸತೀಶ್, ಮಳಲ್ಕೆರೆ ಸದಾನಂದಪ್ಪ, ಆರನೇಕಲ್ಲು ವಿಜಯಕುಮಾರ, ಹೊಸಹಳ್ಳಿ ಶಿವಮೂರ್ತಿ, ಮಾಜಿ ಮೇಯರ್ ಎಚ್.ಎನ್. ಗುರುನಾಥ್ ಇದ್ದರು.