ಜಿಲ್ಲೆ

ಭಿನ್ನಮತ ಶಮನಕ್ಕೆ ಸಂಧಾನ ಯಶಸ್ವಿ

ರಮೇಶ ಜಹಗೀರದಾರ್

ದಾವಣಗೆರೆ : ದಾವಣಗೆರೆ ಬಿಜೆಪಿಯಲ್ಲಿದ್ದ ಭಿನ್ನಮತವನ್ನು ಶಮನ ಮಾಡುವ ನಿಟ್ಟಿನಲ್ಲಿ ವರಿಷ್ಠರು ಮಂಗಳವಾರ ನಡೆಸಿದ ಸಂಧಾನ ಬಹುತೇಕ ಯಶಸ್ವಿಯಾಗಿದೆ. ಇನ್ನೂ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದು ಮುಂಬರುವ ದಿನಗಳಲ್ಲಿ ಸರಿಯಾಗುತ್ತದೆ ಎನ್ನುವ ವಿಶ್ವಾಸ ಪಕ್ಷದಲ್ಲಿ ಮೂಡಿದೆ.
 ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ ದಾಸ್ ಅಗರವಾಲ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮ್ಮುಖದಲ್ಲಿ ನಗರ ಹೊರವಲಯದ ಅಪೂರ್ವಾ ರೆಸಾರ್ಟ್‌ನಲ್ಲಿ ಮನವೊಲಿಕೆ ಪ್ರಯತ್ನಗಳು ನಡೆದವು.
 ಸುದೀರ್ಘ ಎರಡೂವರೆ ಗಂಟೆಗಳ ಕಾಲ ನಡೆದ ಸಂಧಾನ ಸಭೆ ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಜಿ. ಕರುಣಾಕರ ರೆಡ್ಡಿ ಇನ್ನಿತರ ಬಂಡಾಯ ನಾಯಕರ ಜತೆಗೆ ಸಭೆ ನಡೆಸಿದ ವರಿಷ್ಠರು ಅವರ ಮನದಾಳವನ್ನು ತಿಳಿಯಲು ಪ್ರಯತ್ನಿಸಿದರು.
 ಸಂಧಾನ ಒಂದು ಹಂತಕ್ಕೆ ಬಂದಾಗ ಹಾಲಿ ಸಂಸದ ಮತ್ತು ಅವರ ಬೆಂಬಲಿಗರ ಗುಂಪು ಅಲ್ಲಿಗೆ ಆಗಮಿಸಿತು. ಎರಡೂ ಬಣದವರೊಂದಿಗೆ ಮಾತನಾಡಿದ ವರಿಷ್ಠರು ಒಮ್ಮತ ಮೂಡಿಸಲು ಕಸರತ್ತು ಮಾಡಬೇಕಾಯಿತು. ಈ ಸಂದರ್ಭದಲ್ಲಿ ಅನೇಕ ವಿಚಾರಗಳು ಚರ್ಚೆಗೆ ಬಂದು ಮಾತಿನ ಚಕಮಕಿ ನಡೆಯಿತು. ಎರಡೂ ಬಣದವರು ಪರಸ್ಪರ ಏರು ದನಿಯಲ್ಲಿ ವಾಗ್ವಾದಕ್ಕಿಳಿದರು. ವರಿಷ್ಠರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
 ಸಭೆ ಮುಗಿಯುತ್ತಿದ್ದಂತೆ ಹೊರ ಬಂದ ನಾಯಕರು ಸಂಧಾನ ಯಶಸ್ವಿಯಾಗಿದೆ, ಎಲ್ಲರೂ ಒಂದಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಒಮ್ಮತ ಮೂಡಿದೆ ಎಂದು ಹೇಳಿದರು.
 ಮೇಲ್ನೋಟಕ್ಕೆ ಸಂಧಾನ ಯಶಸ್ವಿಯಾದಂತೆ ಕಂಡಿತಾದರೂ ಮನಸುಗಳು ಒಂದಾದಂತೆ ಕಾಣಲಿಲ್ಲ. ಭಿನ್ನರ ಬಣದ ಮಾತಿನ ಧಾಟಿ, ಹಾವಭಾವಗಳನ್ನು ಗಮನಿಸಿದಾಗ ಇನ್ನೂ ಹಲವು ವಿಚಾರಗಳಲ್ಲಿ ವ್ಯತ್ಯಾಸಗಳಿರುವಂತೆ ಭಾಸವಾಯಿತು. ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಣ್ಣ ಪುಟ್ಟ ಸಮಸ್ಯೆಗಳಿವೆ. ನಾವೆಲ್ಲ ಕುಳಿತು ಮಾತನಾಡುತ್ತೇವೆ ಎಂದು ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದರು. ಸಂಧಾನದ ನಂತರ ಎರಡೂ ಬಣದವರು ಒಂದೆಡೆ ಸೇರಿ ಒಗ್ಗಟ್ಟಿನ ಸಂದೇಶ ನೀಡುವ ಪ್ರಯತ್ನವೂ ನಡೆಯಲಿಲ್ಲ.
 ಮಾಜಿ ಸಚಿವರಾದ ಬೈರತಿ ಬಸವರಾಜ, ಶಂಕರ ಪಾಟೀಲ್ ಮುನೇನಕೊಪ್ಪ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್ ಇದ್ದರು.
 ಭಿನ್ನರ ಬಣದಿಂದ ಮಾಜಿ ಶಾಸಕರಾದ ಟಿ. ಗುರುಸಿದ್ಧನಗೌಡ, ಬಸವರಾಜ ನಾಯ್ಕ, ಮಾಜಿ ಎಂಎಲ್ಸಿ ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಡಾ. ಟಿ.ಜಿ. ರವಿಕುಮಾರ್, ಅಜಯ ಕುಮಾರ್, ಲೋಕಿಕೆರೆ ನಾಗರಾಜ, ಮಾಡಾಳು ಮಲ್ಲಿಕಾರ್ಜುನ, ಕಲ್ಲೇಶ್, ಕೆ.ಎಂ. ಸುರೇಶ್ ಭಾಗವಹಿಸಿದ್ದರು.
 ಸಂಸದರ ಜತೆಯಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಪ್ರೊ.ಎನ್. ಲಿಂಗಣ್ಣ, ಮುಖಂಡರಾದ ಯಶವಂತರಾವ್ ಜಾಧವ್, ಶಿವಕುಮಾರ್ ಇತರರು ಇದ್ದರು.