ದಾವಣಗೆರೆ : ಬೆಳಗಾವಿಯ ವಂಟಮುರಿ ಘಟನೆ ಮತ್ತು ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ‘ಮಹಿಳೆಯರ ಮಾನ, ಪ್ರಾಣ ಕಾಪಾಡದ ಕಾಂಗ್ರೆಸ್ ಸರ್ಕಾರ’, ‘ಹೆಣ್ಣು ಭ್ರೂಣ ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಲಿ’ ಎಂದು ಘೋಷಣೆ ಕೂಗಿದರು.
ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮಹಿಳೆಯನ್ನು ಬೆತ್ತಲೆಗೊಳಿಸಿರುವುದು ಹ್ಯೇಯ ಕೃತ್ಯ. ಇಂತಹ ಘಟನೆ ನಡೆದಿದ್ದರೂ ಆ ಬಗ್ಗೆ ಚರ್ಚಿಸದೇ ಸರ್ಕಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರದ ಪ್ರಕರಣಗಳನ್ನು ಹಿಂಪಡೆದಿದೆ. ಇದು ಕರ್ನಾಟಕದಲ್ಲಿ ಬಿಹಾರದ ಆಡಳಿತವಿದೆ ಎನ್ನುವುದನ್ನು ತೋರಿಸುತ್ತದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಆಗಿಲ್ಲ. ಅಧಿಕಾರಕ್ಕೆ ಬಂದು 6 ತಿಂಗಳಿನಿಂದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್ ನಾಯಕರು ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ತಾಯಿಯಾಗಿ, ಮಡದಿಯಾಗಿ ಹೆಣ್ಣು ಬೇಕು. ಆದರೆ ಮಗಳಾಗಿ ಬೇಡ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಗಂಡು, ಹೆಣ್ಣಿನ ಅನುಪಾತ 1000ಕ್ಕೆ 949 ಇತ್ತು, ಈಗ 917ಕ್ಕೆ ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಂಜಾನಾಯ್ಯ, ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ದೂಡಾ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಕೆ.ಎಂ. ಸುರೇಶ್, ಪಾಲಿಕೆ ಸದಸ್ಯರಾದ ಕೆ.ಎಂ.ವೀರೇಶ್, ಪಾಲಿಕೆ ಪ್ರತಿಪಕ್ಷ ನಾಯಕ ಪ್ರಸನ್ನ ಕುಮಾರ್, ಮುಖಂಡರಾದ ಪಿ.ಸಿ. ಶ್ರೀನಿವಾಸ್, ವಿಶ್ವಾಸ್, ಮಂಜುಳಾ ಮಹೇಶ್, ಭಾಗ್ಯಾ ಪಿಸಾಳೆ ಇದ್ದರು.