ಜಿಲ್ಲೆ

ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ಅನುದಾನ ತಾರತಮ್ಯ

ರಮೇಶ ಜಹಗೀರದಾರ್

ದಾವಣಗೆರೆ : ಕಾಂಗ್ರೆಸ್ ಅಧಿಕಾರದಲ್ಲಿರುವ ಮಹಾನಗರ ಪಾಲಿಕೆಯಲ್ಲಿ ಒಂದೆರಡು ವಾರ್ಡ್ ಹೊರತುಪಡಿಸಿ ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಕಡಿಮೆ ಅನುದಾನ ನೀಡಿ ತಾರತಮ್ಯ ಮಾಡಲಾಗಿದೆ ಎಂದು ಬಿಜೆಪಿ ಸದಸ್ಯೆ ಉಮಾ ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 15ನೇ ಹಣಕಾಸು ಯೋಜನೆಯಲ್ಲಿ ನಾನು ಪ್ರತಿನಿಧಿಸುತ್ತಿರುವ 32ನೇ ವಾರ್ಡಿಗೆ ರಸ್ತೆ ಕಾಮಗಾರಿ ಕೈಗೊಳ್ಳಲು ಕಡಿಮೆ ಅನುದಾನ ನೀಡಲಾಗಿದೆ. ದೊಡ್ಡ ವಾರ್ಡ್‌ಗಳಲ್ಲಿ ಒಂದಾಗಿರುವ 32ನೇ ವಾರ್ಡ್‌ನಲ್ಲಿ ನೂರು ಕೋಟಿ ರೂ.ಗಳಷ್ಟು ಅಭಿವೃದ್ಧಿ ಕಾಮಗಾರಿ ಆಗಬೇಕಾಗಿದೆ. ಆದರೆ ಕೇವಲ 15 ಲಕ್ಷ ರೂ.ಗಳನ್ನು ರಸ್ತೆ ಅಭಿವೃದ್ಧಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
 ಉಚಿತ ಗ್ಯಾರಂಟಿಗಳಿಂದಾಗಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 32ನೇ ವಾರ್ಡ್ ಸಹ ಕಾಂಗ್ರೆಸ್‌ಗೆ ಮುನ್ನಡೆ ಕೊಟ್ಟಿದೆ. ಬಿಜೆಪಿ ಸದಸ್ಯರು ಪ್ರತಿನಿಧಿಸುವ ವಾರ್ಡ್ ಎಂಬ ಕಾರಣಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ. ಮಂಗಳವಾರ ನಡೆಯುವ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಮ್ಮುಖದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವುದಾಗಿ ತಿಳಿಸಿದ್ದಾರೆ.
 ಅಕ್ರಮ ಡೋರ್ ನಂಬರ್‌ಗಳನ್ನು ರದ್ದುಪಡಿಸುವಂತೆಯೂ ಸಭೆಯಲ್ಲಿ ಒತ್ತಾಯಿಸುವುದಾಗಿ ಹೇಳಿದ್ದಾರೆ.